ADVERTISEMENT

ಕೇಂದ್ರ ಸರ್ಕಾರದಿಂ ಕಾಶ್ಮೀರದ ಎರಡು ಸಂಘಟನೆ ನಿಷೇಧ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 16:24 IST
Last Updated 11 ಮಾರ್ಚ್ 2025, 16:24 IST
ಮಿರ್ವಾಯಿಜ್ ಉಮರ್ ಫಾರೂಕ್ –ಪಿಟಿಐ ಚಿತ್ರ
ಮಿರ್ವಾಯಿಜ್ ಉಮರ್ ಫಾರೂಕ್ –ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರದ ಮುಸ್ಲಿಂ ಧರ್ಮಗುರು ಮಿರ್ವಾಯಿಜ್ ಉಮರ್ ಫಾರೂಕ್ ನೇತೃತ್ವದ ಅವಾಮಿ ಆ್ಯಕ್ಷನ್ ಕಮಿಟಿ (ಎಎಸಿ) ಮತ್ತು ಶಿಯಾ ಸಮುದಾಯದ ನಾಯಕ ಮಸ್ರೂರ್ ಅನ್ಸಾರಿ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಇತ್ತಿಹಾದುಲ್ ಮುಸ್ಲಿಮೀನ್ ಸಂಘಟನೆಯನ್ನು ಕೇಂದ್ರ ಸರ್ಕಾರವು ಮಂಗಳವಾರ ನಿಷೇಧಿಸಿದೆ.

ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ, ಭಯೋತ್ಪಾದನೆಗೆ ಬೆಂಬಲ ನೀಡಿದ, ಪ್ರತ್ಯೇಕತಾವಾದಿ ಭಾವನೆಗಳಿಗೆ ಪ್ರಚೋದನೆ ನೀಡಿದ ಆರೋಪದ ಅಡಿ ಈ ಸಂಘಟನೆಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹೇಳಿದೆ.

ಕೇಂದ್ರ ಗೃಹ ಸಚಿವಾಲಯವು ಮಿರ್ವಾಯಿಜ್ ಅವರ ಭದ್ರತೆಯನ್ನು ಈಚೆಗಷ್ಟೇ ಹೆಚ್ಚಿಸಿತ್ತು. ಮಿರ್ವಾಯಿಜ್ ಅವರು ಈಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ, ಕಾಶ್ಮೀರಿ ಪಂಡಿತ ಸಮುದಾಯದ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ, ವಕ್ಫ್ ತಿದ್ದುಪಡಿ ಮಸೂದೆ ವಿಚಾರವಾಗಿ ಸಂಸತ್ತಿನ ಸಮಿತಿಯ ಮುಂದೆ ಹಾಜರಾಗಿದ್ದರು.

ADVERTISEMENT

ಸಂಘಟನೆಯನ್ನು ನಿಷೇಧಿಸಿರುವುದನ್ನು ಖಂಡಿಸಿರುವ ಮಿರ್ವಾಯಿಜ್, ‘...ಸತ್ಯದ ದನಿಯನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಬಹುದು, ಆದರೆ ಅದನ್ನು ಅಡಗಿಸಲು ಆಗುವುದಿಲ್ಲ’ ಎಂದು ಹೇಳಿದ್ದಾರೆ. ಮಿರ್ವಾಯಿಜ್ ಅವರು ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಕೂಡ ಹೌದು. ಮಸ್ರೂರ್ ಅನ್ಸಾರಿ ಅವರು ಕೂಡ ಹುರಿಯತ್‌ ಕಾನ್ಫರೆನ್ಸ್‌ನ ನಾಯಕರಲ್ಲಿ ಒಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.