ADVERTISEMENT

ಶ್ರೀನಗರ: ಬಂಡಿಪೋರಾದಲ್ಲಿ ಗುಂಡಿಕ್ಕಿ ವಲಸೆ ಕಾರ್ಮಿಕನನ್ನು ಕೊಂದ ಭಯೋತ್ಪಾದಕರು

ಪಿಟಿಐ
Published 12 ಆಗಸ್ಟ್ 2022, 4:19 IST
Last Updated 12 ಆಗಸ್ಟ್ 2022, 4:19 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಿಹಾರದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಮಧ್ಯರಾತ್ರಿಯ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

‘ಮಧ್ಯರಾತ್ರಿ, ಭಯೋತ್ಪಾದಕರು ಬಿಹಾರದ ಮಾದೇಪುರ ಮೂಲದ ಮೊಹಮ್ಮದ್ ಜಲೀಲ್ ಅವರ ಮಗ, ಕಾರ್ಮಿಕ ಮೊಹಮ್ಮದ್ ಅಮ್ರೇಜ್ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಅಮ್ರೇಜ್ ಅವರನ್ನು ಆಸ್ಪತ್ರೆಗೆ ದಾಖಲಾಗಿತ್ತು’ಎಂದು ಕಾಶ್ಮೀರ ವಲಯ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಆದರೆ, ಚಿಕಿತ್ಸೆಗೂ ಮುನ್ನವೇ ಅಮ್ರೇಜ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ಒಂದು ದಿನದ ನಂತರ ಈ ದಾಳಿ ನಡೆದಿದೆ.

ಸುಬೇದಾರ್ ರಾಜೇಂದ್ರ ಪ್ರಸಾದ್, ರೈಫಲ್‌ಮ್ಯಾನ್ ಮನೋಜ್ ಕುಮಾರ್, ರೈಫಲ್‌ಮ್ಯಾನ್ ಲಕ್ಷ್ಮಣನ್ ಡಿ ಮತ್ತು ರೈಫಲ್‌ಮ್ಯಾನ್ ನಿಶಾಂತ್ ಮಲಿಕ್ ಅವರು ಉಗ್ರರ ಆತ್ಮಾಹುತಿ ದಾಳಿಗೆ ಪ್ರಾಣ ತೆತ್ತಿದ್ದರು. ಸಾವಿಗೂ ಮುನ್ನ, ಅವರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು.

ಕಳೆದ ವಾರ, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಿಹಾರದ ವಲಸೆ ಕಾರ್ಮಿಕ ಮೊಹಮ್ಮದ್ ಮುಮ್ತಾಜ್ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.