ADVERTISEMENT

ಲಾಕ್‌ಡೌನ್ | ಲಖನೌ: ತವರಿನತ್ತ ಚಿತ್ತ– ಬಸ್‌ನಿಲ್ದಾಣಗಳಲ್ಲಿ ಅಸ್ತವ್ಯಸ್ತ

ಲಾಕ್‌ಡೌನ್‌ ಬೆನ್ನಲ್ಲೇ ದೆಹಲಿ ತೊರೆದ ವಲಸೆ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 12:34 IST
Last Updated 20 ಏಪ್ರಿಲ್ 2021, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆಯೇ, ದೆಹಲಿ ತೊರೆದ ಸಾವಿರಾರು ಜನ ವಲಸೆ ಕಾರ್ಮಿಕರು ಉತ್ತರ ಪ್ರದೇಶದ ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದಾರೆ.

ಹೀಗಾಗಿ ಇಲ್ಲಿನ ಬಸ್‌ ನಿಲ್ದಾಣಗಳು ವಲಸೆ ಕಾರ್ಮಿಕರಿಂದ ಗಿಜಿಗುಡುತ್ತಿದ್ದ ದೃಶ್ಯಗಳು ಮಂಗಳವಾರ ಕಂಡು ಬಂದವು. ಸೋಮವಾರ ರಾತ್ರಿ ದೆಹಲಿಯಿಂದ ಹೊರಟಿರುವ ಕಾರ್ಮಿಕರು ಇಲ್ಲಿ ಬಂದಿಳಿದಿದ್ದು, ಈಗ ತಮ್ಮ ಊರುಗಳಿಗೆ ತೆರಳಲು ಬಸ್‌ಗಳನ್ನು ಹುಡುಕುತ್ತಾ ಸಂಚರಿಸಿದರು.

ಅದರಲ್ಲೂ, ಉತ್ತರ ಪ್ರದೇಶದ ಪೂರ್ವ ಭಾಗದ ಜಿಲ್ಲೆಗಳಾದ ಗೋರಖ್‌ಪುರ, ದೇವರಿಯಾ, ಅಜಮ್‌ಗಡ ಹಾಗೂ ಇತರ ಜಿಲ್ಲೆಗಳ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ADVERTISEMENT

ರಾಜ್ಯದಲ್ಲಿ ನಡೆಯುತ್ತಿರುವ ಪಂಚಾಯತ್‌ ಚುನಾವಣೆಗಾಗಿ ಬಸ್‌ಗಳನ್ನು ನಿಯೋಜನೆ ಮಾಡಿರುವ ಕಾರಣ, ನಗರದ ಆಲಂಬಾಗ್‌ನಲ್ಲಿರುವ ಕೇಂದ್ರ ಬಸ್‌ ನಿಲ್ದಾಣದಲ್ಲಿ ಕೆಲವೇ ಬಸ್‌ಗಳು ಇದ್ದವು. ಹೀಗಾಗಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ತೊಂದರೆ ಅನುಭವಿಸಬೇಕಾಯಿತು ಎಂದು ಮೂಲಗಳು ಹೇಳಿವೆ.

‘ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು.

ಭಾರಿ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ದೆಹಲಿ ತೊರೆದು, ರಾಜ್ಯದತ್ತ ಮುಖ ಮಾಡಿದ್ದರಿಂದ ಉಂಟಾಗಿರುವ ತೊಂದರೆಗೆ ದೆಹಲಿ ಸರ್ಕಾರವೇ ಕಾರಣ ಎಂದು ಉತ್ತರ ಪ್ರದೇಶ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ಟೀಕಿಸಿದರು.

‘ತರಾತುರಿಯಲ್ಲಿ ದೆಹಲಿಯಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ದೆಹಲಿ ಸಾರಿಗೆ ಬಸ್‌ಗಳಲ್ಲಿ ಕರೆದುಕೊಂಡು ಬಂದ ಕಾರ್ಮಿಕರನ್ನು , ನೋಯ್ಡಾ ಮತ್ತು ಗಾಜಿಯಾಬಾದ್‌ ಗಡಿಗಳಲ್ಲಿ ಇಳಿಸಿ ಹೋಗಲಾಗಿದೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.