ADVERTISEMENT

ಉಗ್ರರ ಶರಣಾಗತಿ ಸ್ವಾಗತಾರ್ಹ ಬೆಳವಣಿಗೆ: ಕಾಶ್ಮೀರ ಡಿಜಿಪಿ

ಪಿಟಿಐ
Published 31 ಅಕ್ಟೋಬರ್ 2020, 9:39 IST
Last Updated 31 ಅಕ್ಟೋಬರ್ 2020, 9:39 IST
ದಿಲ್ಬಾಗ್‌ ಸಿಂಗ್‌ 
ದಿಲ್ಬಾಗ್‌ ಸಿಂಗ್‌    

ಶ್ರೀನಗರ: ‘ಇತ್ತೀಚಿನ ದಿನಗಳಲ್ಲಿಎನ್‌ಕೌಂಟರ್‌ಗಳ ವೇಳೆ ಉಗ್ರರು, ಭದ್ರತಾ ಪಡೆಗಳ ಎದುರು ಶರಣಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್‌ ಸಿಂಗ್‌ ಶನಿವಾರ ತಿಳಿಸಿದ್ದಾರೆ.

‘ರಾಷ್ಟ್ರೀಯ ಏಕತಾ ದಿನದ’ ಅಂಗವಾಗಿ ಝೆವಾನ್‌ನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಣಿವೆ ನಾಡಿನ ಯುವಕರು ಶಸ್ತ್ರಾಸ್ತ್ರ ತ್ಯಜಿಸಬೇಕು. ಹಿಂಸಾ ಮಾರ್ಗವನ್ನು ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಅಂತಹವರಿಗೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

‘ಹಿಂದಿನ ಕೆಲ ಎನ್‌ಕೌಂಟರ್‌ಗಳ ವೇಳೆ ಉಗ್ರರು, ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ. ಬಹುಮುಖ್ಯವಾಗಿ ಯುವಕರು, ಪೊಲೀಸರು ಹಾಗೂ ಭದ್ರತಾ ಪಡೆಗಳ ಮಾತಿಗೆ ಓಗೊಟ್ಟು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ.ಇದು ಉತ್ತಮ ಬೆಳವಣಿಗೆ’ ಎಂದಿದ್ದಾರೆ.

ADVERTISEMENT

‘ಕಾಶ್ಮೀರದ ಯುವಕರು ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಅಂತಹವರಿಗೆ ನಮ್ಮ ಬೆಂಬಲ ಇದ್ದೇ ಇದೆ. ಅವರಿಗಾಗಿ ನಾವು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇವೆ’ ಎಂದೂ ವಿವರಿಸಿದ್ದಾರೆ.

ಕುಲ್ಗಾಂ ಜಿಲ್ಲೆಯಲ್ಲಿಗುರುವಾರ ಬಿಜೆಪಿಯ ಮೂವರು ಕಾರ್ಯಕರ್ತರ ಹತ್ಯೆ ನಡೆದಿತ್ತು. ಈ ಕುರಿತ ಪ್ರಶ್ನೆಗೆ ‘ತನಿಖೆಯು ಸರಿಯಾದ ಹಾದಿಯಲ್ಲೇ ಸಾಗುತ್ತಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಪತ್ತೆ ಹಚ್ಚಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.