ADVERTISEMENT

ಕಾಂಗ್ರೆಸ್‌ ಗೆದ್ದರೆ ಗೋವಾದಲ್ಲಿ ಗಣಿಗಾರಿಕೆ: ಚಿದಂಬರಂ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 21:18 IST
Last Updated 6 ಫೆಬ್ರುವರಿ 2022, 21:18 IST
   

ಪಣಜಿ (ಪಿಟಿಐ): ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಣಿಗಾರಿಕೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಪಕ್ಷದ ಮುಖಂಡ ಪಿ.ಚಿದಂಬರಂ ಭರವಸೆ ಕೊಟ್ಟಿದ್ದಾರೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಣಿಗಾರಿಕೆಯು ರಾಜ್ಯದ ಆದಾಯದಪ್ರಮುಖ ಮೂಲವಾಗಿತ್ತು. ಆದರೆ, 88 ಗಣಿಗಾರಿಕೆ ಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್‌ 2018ರಲ್ಲಿ ರದ್ದು ಮಾಡಿತ್ತು. ಇದರೊಂದಿಗೆ ರಾಜ್ಯದಲ್ಲಿ ಗಣಿಗಾರಿಕೆಯು ಸಂಪೂರ್ಣಸ್ಥಗಿತವಾಗಿತ್ತು.

ಸಂಪನ್ಮೂಲಗಳನ್ನು ಶೋಧಿಸುವುದು ರಾಜ್ಯದ ಸಮಸ್ಯೆ ಅಲ್ಲ. ಬದಲಿಗೆ, ಅದರ ಹಂಚಿಕೆಯೇ ಸಮಸ್ಯೆ. ವಿವೇಕಯುತ ಮತ್ತು ಯೋಚನೆ ಮಾಡಬಲ್ಲ ಜನರ ಕೈಗೆ ಅಧಿಕಾರ ಸಿಕ್ಕರೆ ಎಲ್ಲದಕ್ಕೂ ಸಂಪನ್ಮೂಲ ಹಂಚಿಕೆ ಸಾಧ್ಯ. ಹಾಗಾದರೆ, ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಐದು ವರ್ಷದಲ್ಲಿ ಈಡೇರಿಸಬಹುದು ಎಂದು ಚಿದಂಬರಂ ಹೇಳಿದರು.

ADVERTISEMENT

ಚಿದಂಬರಂ ಅವರು ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಹಿರಿಯ ವೀಕ್ಷಕರಾಗಿದ್ದಾರೆ.

ಗೋವಾ ರಾಜ್ಯವು ಮಾಹಿತಿ ತಂತ್ರಜ್ಞಾನ ಮತ್ತು ಔಷಧ ತಯಾರಿಕಾ ಕೇಂದ್ರವಾಗಿ ಮಾರ್ಪಟ್ಟರೆ ಸಂಪನ್ಮೂಲಕ್ಕೆ ಕೊರತೆಯೇ ಇರುವುದಿಲ್ಲ. ಸಂಪನ್ಮೂಲಗಳು ದುಪ್ಪಟ್ಟಾಗುತ್ತಾ ಹೋಗುತ್ತವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾದರೆ ವರಮಾನವೂ ಕುಗ್ಗುತ್ತದೆ ಎಂದು ಚಿದಂಬರಂ ವಿವರಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿಯೇ ಕಾನೂನುಬದ್ಧವಾಗಿ ಸುಸ್ಥಿರ ರೀತಿಯಲ್ಲಿ ಗಣಿಗಾರಿಕೆ ನಡೆಸಬಹುದು. ಆದರೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಗೋವಾದಲ್ಲಿ ಪಕ್ಷಾಂತರದ ರೋಗ ಕೊನೆಯಾಗಬೇಕು. ಪಕ್ಷಾಂತರಿಗಳನ್ನು ಉಪ ಚುನಾವಣೆಗಳಲ್ಲಿ ಸೋಲಿಸುವ ನಿರ್ಧಾರಕ್ಕೆ ಜನರು ಬಂದರೆ ಇದು ಸಾಧ್ಯ ಎಂದು ಚಿದಂಬರಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.