ADVERTISEMENT

ಗೋವಾದಲ್ಲಿ ಗಣಿಗಾರಿಕೆ ಪುನರಾರಂಭ: ಶಾ

ಚುನಾವಣೆ ಬಳಿಕ ದುಪ್ಪಟ್ಟು ವೇಗದಲ್ಲಿ ಶುರು; ಪಾರದರ್ಶಕ ಹರಾಜು ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:45 IST
Last Updated 30 ಜನವರಿ 2022, 19:45 IST
ಗೋವಾದ ಪೊಂಡಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಭಾನುವಾರ ಚುನಾವಣಾ ಪ್ರಚಾರ ನಡೆಸಿದರು                   –‍‍ಪಿಟಿಐ ಚಿತ್ರ
ಗೋವಾದ ಪೊಂಡಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಭಾನುವಾರ ಚುನಾವಣಾ ಪ್ರಚಾರ ನಡೆಸಿದರು        –‍‍ಪಿಟಿಐ ಚಿತ್ರ   

ಪ‍ಣಜಿ (ಪಿಟಿಐ):ವಿಧಾನಸಭಾ ಚುನಾವಣೆ ಬಳಿಕ, ಗೋವಾದ ಗಣಿಗಾರಿಕೆ ಉದ್ಯಮವು ಎರಡು ಪಟ್ಟು ವೇಗದಲ್ಲಿ ಪುನರಾರಂಭವಾಗಲಿದೆ ಎಂದುಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಹೇಳಿದ್ದಾರೆ.ಗೋವಾ ವಿಧಾನಸಭೆಯ ಪ್ರಚಾರ ಕಣಕ್ಕೆ ಧುಮುಕಿರುವ ಅವರು, ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಪಾರದರ್ಶಕ ಹರಾಜು ಪ್ರಕ್ರಿಯೆ ಮೂಲಕ ಶುರು ಮಾಡಲಾಗುವುದು ಭರವಸೆ ನೀಡಿದರು.

2018ರಲ್ಲಿ 88 ಗಣಿ ಗುತ್ತಿಗೆ ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬಳಿಕ, ಗೋವಾದ ಪ್ರಮುಖ ಆದಾಯದ ಮೂಲವಾಗಿದ್ದ ಗಣಿಗಾರಿಕೆ ಸ್ತಬ್ಧವಾಗಿತ್ತು. ಚುನಾವಣೆ ಬಳಿಕ ಗಣಿಗಾರಿಕೆಗೆ ಜೀವಬರಲಿದೆ ಎಂದು ಗಣಿಗಾರಿಕೆಯ ಪ್ರಮುಖ ಭಾಗ ಎಂದು ಪರಿಗಣಿತವಾಗಿರುವ ಸನ್ವೋರ್ಡಮ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿದ ರ್‍ಯಾಲಿ ಬಳಿಕ ಅವರು ತಿಳಿಸಿದರು.

‘ಗಣಿಗಾರಿಕೆ ಪುನರಾರಂಭ ಕುರಿತಂತೆ ಕೇಂದ್ರ ಸರ್ಕಾರ ಯಾವುದೇ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ರಾಜ್ಯದ ಗಣಿ ಉದ್ಯಮದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ವಿಸ್ತೃತವಾಗಿ ಅಧ್ಯಯನ ಮಾಡಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ಸಂಬಂಧ ನನ್ನ ಜೊತೆ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಷಿ, ಸಾಲಿಸಿಟರ್ ಜನರಲ್ ಮತ್ತು ಅಟಾರ್ನಿ ಜನರಲ್ ಅವರನ್ನೂ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ’ ಎಂದು ಶಾ ವಿವರಿಸಿದರು.

ADVERTISEMENT

ಕೇಂದ್ರ ಸರ್ಕಾರವು ವಿಶೇಷ ಗಣಿಗಾರಿಕೆ ನೀತಿಯನ್ನು ರಚಿಸಿದೆ. ಈ ನಂತರ ರಾಜ್ಯ ಸರ್ಕಾರವು ರಾಜ್ಯದಲ್ಲಿ ಖನಿಜ ನಿಗಮವನ್ನು ರಚಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳು (ಎಂಜಿಪಿ) ಸಹ ಶನಿವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಗಣಿಗಾರಿಕೆಯನ್ನು ಪುನರಾರಂಭಿಸುವ ಭರವಸೆ ನೀಡಿವೆ.

ಆಯ್ಕೆ ನಿಮ್ಮದು:ಅಮಿತ್ ಶಾ ಅವರು ಎರಡು ಆಯ್ಕೆಗಳನ್ನು ಜನರ ಮುಂದಿಟ್ಟರು.ಬಿಜೆಪಿಯ ‘ಚಿನ್ನದ ಗೋವಾ’ ಅಥವಾ ಕಾಂಗ್ರೆಸ್‌ನ ‘ಗಾಂಧಿ ಪರಿವಾರದ ಗೋವಾ’ – ಇವೆರಡರ ಮಧ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು. ಬಿಜೆಪಿಯಿಂದ ಮಾತ್ರ ರಾಜ್ಯದಲ್ಲಿ ರಾಜಕೀಯ ಸ್ಥಿರತೆ ತರಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ರಾಜ್ಯದ ಹೊರಗಿನ ಪಕ್ಷಗಳಾದ ಟಿಎಂಸಿ ಹಾಗೂ ಎಎಪಿ ಗೋವಾಕ್ಕೆ ಬಂದು ಸ್ಪರ್ಧಿಸುತ್ತಿರುವುದನ್ನು ಶಾ ಟೀಕಿಸಿದ್ದಾರೆ. ಗೋವಾದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದ ಈ ಪಕ್ಷಗಳಿಂದ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಗೋವಾದಂತಹ ಸಣ್ಣ ರಾಜ್ಯಗಳ ಅಭಿವೃದ್ಧಿಗೆ ಅದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.

ಅಸಮರ್ಪಕ ಆಡಳಿತದಿಂದ ಗೋವಾವನ್ನು ನಾಶ ಮಾಡಿದ ಕಾಂಗ್ರೆಸ್ ಹಾಗೂ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರನ್ನು ಶಾ ತರಾಟೆಗೆ ತೆಗೆದುಕೊಂಡರು. ಕಳೆದ ಹತ್ತು ವರ್ಷಗಳಲ್ಲಿ
ರಾಜ್ಯದಲ್ಲಿ ಸ್ಥಿರವಾದ ಹಾಗೂ ಅಭಿವೃದ್ಧಿ ಪಥದ ಸರ್ಕಾರವನ್ನು ನೀಡಿದ್ದು ಬಿಜೆಪಿ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.