ADVERTISEMENT

ಸುಷ್ಮಾ ಪರ ಧ್ವನಿ ಎತ್ತಿದ ಸಚಿವರು

ಪಿಟಿಐ
Published 3 ಜುಲೈ 2018, 20:19 IST
Last Updated 3 ಜುಲೈ 2018, 20:19 IST
ಸುಷ್ಮಾ ಸ್ವರಾಜ್‌
ಸುಷ್ಮಾ ಸ್ವರಾಜ್‌   

ನವದೆಹಲಿ: ಲಖನೌನ ಅಂತರ್‌ಧರ್ಮೀಯ ದಂಪತಿಗೆ ಪಾಸ್‌ಪೋರ್ಟ್‌ ಕೊಡಿಸಲು ಸಹಾಯ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪರವಾಗಿ, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಹಾಗೂ ರಾಮ್‌ ವಿಲಾಸ್‌ ಪಾಸ್ವಾನ್‌ ಧ್ವನಿ ಎತ್ತಿದ್ದಾರೆ.

‘ಸುಷ್ಮಾ ಅವರು ದಂಪತಿಗೆ ಪಾಸ್‌ಪೋರ್ಟ್‌ ಕೊಡಿಸಲು ಸಹಾಯ ಮಾಡಿದ್ದಾರೆ. ಅದನ್ನು ಬಿಟ್ಟು ಬೇರೇನೂ ಮಾಡಿಲ್ಲ’ ಎಂದು ಗಡ್ಕರಿ ಹೇಳಿದ್ದಾರೆ.

‘ಸುಷ್ಮಾ ವಿರುದ್ಧದ ಟೀಕೆಗಳು ದುರದೃಷ್ಟಕರ. ನಾನು ಅವರೊಂದಿಗೆ ಚರ್ಚಿಸಿದ್ದೇನೆ. ದಂಪತಿಗೆ ಪಾಸ್‌ಪೋರ್ಟ್‌ ನೀಡುವ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಅವರು ದೇಶದಲ್ಲಿ ಇರಲಿಲ್ಲ. ಇದರಲ್ಲಿ ಅವರ ಪಾತ್ರ ಏನೂ ಇಲ್ಲ. ಅವರ ವಿರುದ್ಧ ಅಸಭ್ಯ ಪದಗಳ ಬಳಕೆ ಸರಿಯಲ್ಲ. ಜನ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ADVERTISEMENT

ಟ್ವಿಟರ್‌ನಲ್ಲಿ ಇಂತಹ ಟೀಕೆಗಳನ್ನು ನೀವು ಒಪ್ಪುವಿರಾ ಎಂದು ಬಳಕೆದಾರರನ್ನು ಸುಷ್ಮಾ ಪ್ರಶ್ನಿಸಿದ್ದರು. ಇದಕ್ಕೆ ಶೇಕಡ 43ರಷ್ಟು ಜನ ‘ಹೌದು’ ಎಂದು ಮತ್ತು ಶೇಕಡ 57ರಷ್ಟು ಜನ ‘ಇಲ್ಲ’ ಎಂದು ಉತ್ತರಿಸಿದ್ದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಅಭಿಪ್ರಾಯಗಳು ಸಹಜ. ವಿಮರ್ಶೆ ಮಾಡಿ. ಆದರೆ, ತುಚ್ಛ ಭಾಷೆ ಬಳಸಬೇಡಿ. ಯೋಗ್ಯ ಭಾಷೆಯ ಟೀಕೆ ಹೆಚ್ಚು ಪರಿಣಾಮಕಾರಿ’ ಎಂದು ಸುಷ್ಮಾ ಈ ಮುಂಚೆ ಟ್ವೀಟ್‌ ಮಾಡಿದ್ದರು.

‘ಸುಷ್ಮಾ ಹಿರಿಯ ಸಂಸದೆ. ನಾವು ಅವರನ್ನು ಗೌರವಿಸಬೇಕು. ಅವರ ವಿರುದ್ಧ ಅಸಭ್ಯ ಪದಗಳ ಬಳಕೆ ಸರಿಯಲ್ಲ’ ಎಂದು ಪಾಸ್ವಾನ್‌ ಹೇಳಿದ್ದಾರೆ.

ಈ ಇಬ್ಬರಿಗಿಂತ ಮೊದಲು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಸುಷ್ಮಾ ಪರ ಹೇಳಿಕೆ ನೀಡಿದ್ದರು.

**

‘ಇದೋ... ಬ್ಲಾಕ್‌ ಮಾಡಿದ್ದೇನೆ’

ಪಾಸ್‌ಪೋರ್ಟ್‌ಗೆ ನೆರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ಟ್ವಿಟರ್‌ನಲ್ಲಿ ನಿರಂತವಾಗಿ ತಮ್ಮನ್ನು ಟೀಕಿಸುತ್ತಿದ್ದ ಸೋನಮ್‌ ಮಹಾಜನ್‌ ಎಂಬುವವರನ್ನು ತಮ್ಮ ಖಾತೆಯಿಂದ ಬ್ಲಾಕ್‌ ಮಾಡುವ ಮೂಲಕ, ಸುಷ್ಮಾ ಸ್ವರಾಜ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಸುಷ್ಮಾ ಸ್ವರಾಜ್‌ ಅವರೇ, ನೀವು ನನ್ನನ್ನು ಟ್ವಿಟರ್‌ನಲ್ಲಿ ಬ್ಲಾಕ್‌ ಮಾಡುವ ಮೂಲಕ ಪಾರಿತೋಷಕ ನೀಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ’ ಎಂದು ಸೋನಮ್‌ ಸವಾಲು ಹಾಕಿದ್ದರು.

ಇದಕ್ಕೆ ‘ಯಾಕೆ ಕಾಯುತ್ತೀರಿ? ಇದೋ ನಿಮ್ಮನ್ನು ಬ್ಲಾಕ್‌ ಮಾಡಿದ್ದೇನೆ’ ಎಂದು ಸುಷ್ಮಾ ಕಟುವಾಗಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.