ಪ್ರಾತಿನಿಧಿಕ ಚಿತ್ರ
ನವದೆಹಲಿ: ಅತ್ಯಾಚಾರ ಸಂತ್ರಸ್ತೆ, 30 ವಾರಗಳ ಗರ್ಭಿಣಿಯಾದ 14 ವರ್ಷದ ಬಾಲಕಿಯು ಮಗುವಿಗೆ ಜನ್ಮ ನೀಡಲು ಅನುಮತಿ ನೀಡಿದ್ದಾಳೆ. ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಬಾಲಕಿಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಳು.
‘ದತ್ತು ತೆಗೆದುಕೊಳ್ಳುವವರಿಗೆ ಈ ಮಗುವನ್ನು ನೀಡಲಾಗುವುದು’ ಎಂದು ನ್ಯಾಯಾಲಯ ಹೇಳಿದೆ. ಬಾಲಕಿಯ ಪೋಷಕರು ಈಕೆಯನ್ನು ತೊರೆದಿದ್ದಾರೆ. ಸದ್ಯ ಬಾಲಕಿಯು ದೆಹಲಿಯ ಆಶ್ರಯಧಾಮವೊಂದರಲ್ಲಿ ಆಶ್ರಯ ಪಡೆದಿದ್ದಾಳೆ.
ಹತ್ತಿರದ ಸಂಬಂಧಿ ವ್ಯಕ್ತಿಯೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವ್ಯಕ್ತಿಯ ತಾಯಿಯ ಸಹಾಯದಿಂದಲೇ ಬಾಲಕಿಯು ನ್ಯಾಯಾಲಯದ ಮೊರೆಹೋಗಿದ್ದಾಳೆ. ತಾನು ಗರ್ಭಿಣಿ ಎಂದು ಬಾಲಕಿಗೆ ಆಗಸ್ಟ್ ಮೊದಲ ವಾರದಲ್ಲಿ ವೈದ್ಯರ ಮೂಲಕ ತಿಳಿಯಿತು. ಅದಾಗಲೇ ಆಕೆಯು 27 ವಾರಗಳ ಗರ್ಭಿಣಿಯಾಗಿದ್ದಳು. ನ್ಯಾಯಾಲಯಕ್ಕೆ ಹೋಗುವಂತೆ ವೈದ್ಯರೇ ಬಾಲಕಿಗೆ ಸಲಹೆ ನೀಡಿದ್ದರು.
‘ಬಾಲಕಿಗೆ ಬಾಲನ್ಯಾಯ ಕಾಯ್ದೆ ಅನ್ವಯ ರಕ್ಷಣೆ ದೊರೆಯಬೇಕು. ಮಹಿಳಾ ಆಯೋಗವು ಬಾಲಕಿಯೊಂದಿಗೆ ಮಾತುಕತೆ ನಡೆಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಆಗಸ್ಟ್ 18ರಂದು ಆದೇಶ ನೀಡಿದ್ದರು.
ಆಯೋಗದ ಆಪ್ತ ಸಮಾಲೋಚನೆ ಬಳಿಕ ಮಗುವಿಗೆ ಜನ್ಮ ನೀಡುವುದಕ್ಕೆ ಬಾಲಕಿ ಹಾಗೂ ಆಕೆಯ ಸಂಬಂಧಿ ಮಹಿಳೆಯು ಒಪ್ಪಿಗೆ ನೀಡಿದ್ದಾರೆ. ‘ಗರ್ಭಪಾತ ಮಾಡುವುದರಿಂದ ಬಾಲಕಿಗೆ ಭವಿಷ್ಯದಲ್ಲಿ ತೀವ್ರ ತೊಂದರೆ ಆಗುತ್ತದೆ. ಮಗುವಿಗೆ ಜನ್ಮ ನೀಡುವುದೇ ಸೂಕ್ತ’ ಎಂದು ವೈದ್ಯರ ತಂಡವೂ ಸಲಹೆ ನೀಡಿತ್ತು.
ಈ ವಿಚಾರವನ್ನು ಆಯೋಗವು ನ್ಯಾಯಾಲಯದ ಗಮನಕ್ಕೆ ತಂದಿತು. ‘ಗರ್ಭಪಾತ ಮಾಡುವುದು ಬೇಡ’ ಎಂದು ಕೋರ್ಟ್ ಕೂಡ ಅಭಿಪ್ರಾಯಪಟ್ಟಿತು. ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ಮಕ್ಕಳ ಅಭಿವೃದ್ಧಿ ಸಮಿತಿಯು ಈ ಪ್ರಕರಣದ ಬಗ್ಗೆ ತನ್ನ ವರದಿಯನ್ನು ಇದೇ ದಿನವೇ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.