ನವದೆಹಲಿ: ವೊಡಾಫೋನ್, ಏರ್‌ಟೆಲ್ ಮತ್ತು ಟಾಟಾ ಟೆಲಿಸರ್ವೀಸಸ್ ಟೆಲಿಕಾಂ ಸಂಸ್ಥೆಗಳು ‘ಹೊಂದಾಣಿಕೆ ಮಾಡಿದ ನಿವ್ವಳ ಆದಾಯ’ದ (ಎಜಿಆರ್) ಮನ್ನಾ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರನ್ನು ಒಳಗೊಂಡ ನ್ಯಾಯಪೀಠವು, ಅರ್ಜಿಗಳು ‘ತಪ್ಪು ಗ್ರಹಿಕೆಯಿಂದ ಕೂಡಿವೆ’ ಎಂದು ಹೇಳಿದೆ.
‘ಈ ಅರ್ಜಿಗಳನ್ನು ನೋಡಿ ಆಘಾತವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಈ ಅರ್ಜಿಗಳನ್ನು ವಜಾಗೊಳಿಸುತ್ತೇವೆ’ ಎಂದು ನ್ಯಾಯಪೀಠವು ವೊಡಾಫೋನ್ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೊಹಟಗಿ ಅವರಿಗೆ ತಿಳಿಸಿತು.
ವಿಚಾರಣೆ ಆರಂಭವಾದಾಗ ಅರ್ಜಿಯ ವಿಚಾರಣೆಯನ್ನು ಜುಲೈಗೆ ಮುಂದೂಡಲು ರೊಹಟಗಿ ಕೋರಿದರು. ಕೋರ್ಟ್ ಕಾರಣ ಕೇಳಿದಾಗ, ‘ನ್ಯಾಯಾಲಯದ ಹೊರಗೆ ಸಮಸ್ಯೆ ಪರಿಹಾರಕ್ಕಾಗಿ ಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದರು.
ಸರ್ಕಾರವು ವೊಡಾಫೋನ್‌ನ ಶೇ 50ರಷ್ಟು ಮಾಲೀಕತ್ವವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಆಗ ನ್ಯಾಯಪೀಠವು, ‘ಸರ್ಕಾರವು ನಿಮಗೆ ಸಹಾಯ ಮಾಡಲು ಬಯಸಿದರೆ, ಸಹಾಯ ಮಾಡಲಿ. ಆ ಹಾದಿಗೆ ಅಡ್ಡ ಬರುವುದಿಲ್ಲ. ಆದರೆ ಈಗ ಅರ್ಜಿಯನ್ನು ವಜಾಗೊಳಿಸುತ್ತೇವೆ’ ಎಂದು ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.