
ಮುಜಾಫರ್‌ನಗರ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಅಚ್ಚರಿಯ ಘಟನೆ ವರದಿಯಾಗಿದೆ. ಬಹುತೇಕ ಮೂರು ದಶಕಗಳಿಂದ ನಾಪತ್ತೆಯಾಗಿದ್ದ ಹಾಗೂ ಕುಟುಂಬದವರೇ ಮೃತಪಟ್ಟಿದ್ದಾನೆ ಎಂದು ನಂಬಿದ್ದ 79 ವರ್ಷದ ವ್ಯಕ್ತಿಯೊಬ್ಬರು ಇದೀಗ, ಎಸ್‌ಐಆರ್‌ಗಾಗಿ ದಾಖಲೆಗಳನ್ನು ಸಂಗ್ರಹಿಸಲು ಹುಟ್ಟೂರಿಗೆ ವಾಪಸ್ ಆಗಿದ್ದಾರೆ.
ಮುಜಾಫರ್‌ನಗರ ಜಿಲ್ಲೆಯ ಖತೌಲಿ ಪಟ್ಟಣದ ಷರೀಫ್ ಅಹ್ಮದ್ ಎಂಬವರೇ ಆ ವ್ಯಕ್ತಿ.
ಮೊದಲ ಹೆಂಡತಿ ಮೃತಪಟ್ಟ ಬಳಿಕ, ಎರಡನೇ ಮದುವೆಯಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಅವರು, 1997ರಿಂದ ನಾಪತ್ತೆಯಾಗಿದ್ದರು. ಆದರೆ, ಈಗ ಎಸ್‌ಐಆರ್‌ಗೆ ದಾಖಲೆಗಳನ್ನು ಸಂಗ್ರಹಿಸುವ ಸಲುವಾಗಿ ಅವರು ಡಿಸೆಂಬರ್ 29ರಂದು ಖತೌಲಿಗೆ ವಾಪಸ್ ಆಗಿದ್ದಾರೆ.
ಈ ಕುರಿತು ಷರೀಫ್ ಅವರ ಸಂಬಂಧಿ ವಸೀಮ್ ಅಹ್ಮದ್ ಮಾಹಿತಿ ನೀಡಿದ್ದಾರೆ.
'ಅವರನ್ನು ಪತ್ತೆ ಮಾಡಲು ಸಾಕಷ್ಟು ವರ್ಷ ಪ್ರಯತ್ನಿಸಿದ್ದೆವು. ಅವರ ಎರಡನೇ ಹೆಂಡತಿ ನೀಡಿದ್ದ ವಿಳಾಸ ಹುಡುಕಿಕೊಂಡು ಪಶ್ಚಿಮ ಬಂಗಾಳಕ್ಕೂ ಹೋಗಿದ್ದೆವು. ಆದರೂ, ಯಾವ ಪ್ರಯೋಜನವೂ ಆಗಿರಲಿಲ್ಲ. ದಶಕಗಳಿಂದ ಸುಳಿವೇ ಇಲ್ಲದಿದ್ದರಿಂದ, ಅವರು ಬದುಕಿಲ್ಲ ಎಂದು ಭಾವಿಸಿದ್ದೆವು' ಎಂದು ತಿಳಿಸಿದ್ದಾರೆ.
ಈ ಪುನರ್ಮಿಲನವು ಕುಟುಂಬಕ್ಕೆ ಸಂತಸ ತಂದಿದೆ ಎಂದೂ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಯುತ್ತಿರುವುದರಿಂದ ದಾಖಲೆಗಳನ್ನು ಸಂಗ್ರಹಿಸುವುದಕ್ಕಾಗಿ ಊರಿಗೆ ಬಂದೆ. ಹೀಗಾಗಿ, ಮತ್ತೊಮ್ಮೆ ಹುಟ್ಟೂರಿನೊಂದಿಗೆ, ಕುಟುಂಬದವರೊಂದಿಗೆ ಬೆರೆಯಲು ಸಾಧ್ಯವಾಯಿತು ಎಂದು ಷರೀಫ್ ಹೇಳಿಕೊಂಡಿದ್ದಾರೆ.
ಅವರ ತಂದೆ, ಸಹೋದರರು, ಸಂಬಂಧಿಕರಲ್ಲಿ ಕೆಲವರು ಹಾಗೂ ಆತ್ಮೀಯ ಸ್ನೇಹಿತರು ಮೃತಪಟ್ಟಿದ್ದಾರೆ ಎಂಬುದು ಹುಟ್ಟೂರಿನ ಭೇಟಿ ಸಂದರ್ಭದಲ್ಲಿ ಷರೀಫ್‌ಗೆ ಗೊತ್ತಾಗಿದೆ.
ಅವರು ಸದ್ಯ ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯಲ್ಲಿ ಎರಡನೇ ಪತ್ನಿ, ಕುಟುಂಬದೊಂದಿಗೆ ವಾಸವಿದ್ದು, ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ವಾಪಸ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.