
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಒಂದು ದಿನದ ಮುನ್ನ ನ.30ರಂದು ಸರ್ವಪಕ್ಷಗಳ ಸಭೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕರೆದಿದ್ದಾರೆ.
ಬಿಹಾರ ಚುನಾವಣೆಯ ಗೆಲುವಿನಿಂದ ಎನ್‌ಡಿಎ ಬೀಗುತ್ತಿದ್ದರೆ, ವಿರೋಧ ಪಕ್ಷಗಳು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್), ಅಮೆರಿಕದ ವ್ಯಾಪಾರ ಸುಂಕಗಳು ಮುಂತಾದ ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸುತ್ತಿವೆ.
ಸಂಸತ್ ಭವನದ ಅನೆಕ್ಸ್ ಕಟ್ಟಡದಲ್ಲಿ ಸಭೆ ನಡೆಯಲಿದೆ. ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಕಳುಹಿಸಿರುವ ಮಸೂದೆಗಳ ಕುರಿತು ಚರ್ಚಿಸಲಾಗುತ್ತದೆ. ಸರ್ಕಾರ 10 ಮಸೂದೆಗಳನ್ನು ಮಂಡಿಸಲಿದ್ದು, ಅಧಿವೇಶನವು ಕಾವೇರಿದ ಚರ್ಚೆಗೆ ಕಾರಣವಾಗಲಿದೆ.
‘ಸಂವಿಧಾನದ 240ನೇ ವಿಧಿಯಡಿ ಚಂಡೀಗಢವನ್ನು ಸೇರಿಸಲು ಪ್ರಸ್ತಾಪಿಸಲಾದ ಮಸೂದೆಯು ಈ ಹಿಂದೆ ಕೋಲಾಹಲವನ್ನು ಸೃಷ್ಟಿಸಿತ್ತು. ನಂತರ ಸರ್ಕಾರ ಅದನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಮತ್ತೊಂದು ಮಸೂದೆಯು ಯುಜಿಸಿ, ಎಐಸಿಟಿಇ ಮತ್ತು ಎನ್‌ಟಿಎಗಳನ್ನು ಭಾರತೀಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ವಿಲೀನಗೊಳಿಸುವ ಪ್ರಸ್ತಾಪವನ್ನು ಹೊಂದಿದೆ. ಈ ಮಸೂದೆಗಳನ್ನು ವಿರೋಧ ಪಕ್ಷಗಳಿಗೆ ಗಮನಕ್ಕೆ ತರಲು ಸಭೆ ಕರೆಯಲಾಗುವುದು’ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಹಿಂದೆ ಹೇಳಿದ್ದರು.
‘ನಾವು ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಿದ್ದೇವೆ. ಅಂಗೀಕಾರವಾಗಬೇಕಿರುವ ಎಲ್ಲ ಬಾಕಿ ಮಸೂದೆಗಳ ಪರಿಶೀಲನೆ ನಡೆಸುತ್ತೇವೆ. ನಂತರ ಸರ್ವಪಕ್ಷ ಸಭೆ ಕರೆದು ವಿರೋಧ ಪಕ್ಷಗಳ ನಾಯಕರೊಂದಿಗೆ ಮಸೂದೆಗಳ ಪಟ್ಟಿಯನ್ನು ಹಂಚಿಕೊಳ್ಳುತ್ತೇವೆ. ಅವರ ಸಲಹೆಗಳ ಪ್ರಕಾರ ಕಾರ್ಯತಂತ್ರಗಳನ್ನು ರೂಪಿಸುತ್ತೇವೆ’ ಎಂದು ಮೇಘವಾಲ್ ಈ ವಾರದ ಆರಂಭದಲ್ಲಿ ತಿಳಿಸಿದ್ದರು.
‘ವಿರೋಧ ಪಕ್ಷಗಳು ಕೆಲ ವಿಷಯಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನೋಡುತ್ತಿವೆ. ಅವುಗಳಲ್ಲಿ ಪ್ರಮುಖವಾದವು ಎಸ್‌ಐಆರ್ ಮತ್ತು ಚುನಾವಣಾ ಆಯೋಗದ ಪಾತ್ರ. ದೆಹಲಿಯ ವಾಯುಮಾಲಿನ್ಯ ಮತ್ತು ಉಸಿರಾಟದ ತೊಂದರೆ, ಪ್ರವಾಹ ಪರಿಹಾರ, ನಿರುದ್ಯೋಗ ಸೇರಿದಂತೆ ಅನೇಕ ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ಮುಖ್ಯ ಸಚೇತಕ ಮಾಣಿಕ್ಕಂ ಟ್ಯಾಗೋರ್ ಹೇಳಿದರು.
‘ಡಿ.1ರಿಂದ 19ರವರೆಗೆ ಅಧಿವೇಶನ ನಡೆಯಲಿದೆ’ ಎಂದು ರಿಜಿಜು ಈ ಹಿಂದೆ ‘ಎಕ್ಸ್’ನಲ್ಲಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.