ಪಟ್ನಾ: ‘ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಶಾಸಕರನ್ನು ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಕುರಿತಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಳಿದ ಅವಧಿಗೆ ವಿರೋಧ ಪಕ್ಷಗಳು ವಿಧಾನಸಭೆ ಕಲಾಪಕ್ಕೆ ಹಾಜರಾಗುವುದಿಲ್ಲ’ ಎಂದು ವಿರೋಧ ಪಕ್ಷದ ಮುಖಂಡ ತೇಜಸ್ವಿ ಯಾದವ್ ಬುಧವಾರ ಹೇಳಿದ್ದಾರೆ.
ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬಿಹಾರದಲ್ಲಿ ವಿರೋಧ ಪಕ್ಷಗಳಾಗಿವೆ.
‘ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಕಾಯ್ದೆ–2021’ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರ ಮಂಡಿಸಿತ್ತು. ಈ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದಿದ್ದ ಆರ್‌ಜೆಡಿ, ಕಾಂಗ್ರೆಸ್‌ನ ಶಾಸಕರನ್ನು ಸದನದಿಂದ ಹೊರ ಹಾಕುವಂತೆ ಮಾರ್ಷಲ್‌ಗಳಿಗೆ ಸೂಚಿಸಲಾಯಿತು. ಆಗ, ಮಾರ್ಷಲ್‌ಗಳೊಂದಿಗೆ ನಡೆದ ಜಟಾಪಟಿ ವೇಳೆ ಉಭಯ ಪಕ್ಷಗಳ ಕೆಲವು ಶಾಸಕರಿಗೆ ಗಾಯಗಳಾಗಿದ್ದವು.
‘ನನ್ನ ಹೆಸರು ತೇಜಸ್ವಿ. ಸರ್ಕಾರ ಶಾಶ್ವತವಲ್ಲ ಎಂಬುದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಅವರ ಕೈಗೊಂಬೆಯಂತೆ ವರ್ತಿಸುವ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಅಸಂಸದೀಯ ವರ್ತನೆಗೆ ನಾಂದಿ ಹಾಡಿದೆ. ಈ ಘಟನೆ ಕುರಿತಂತೆ ನಿತೀಶ್ ಕುಮಾರ್ ಕ್ಷಮೆ ಕೇಳದೇ ಇದ್ದಲ್ಲಿ ಉಳಿದ ಅವಧಿಗೆ ನಾವು (ವಿರೋಧ ಪಕ್ಷಗಳು) ವಿಧಾನಸಭೆ ಕಲಾಪವನ್ನು ಬಹಿಷ್ಕರಿಸುತ್ತೇವೆ’ ಎಂದು ತೇಜಸ್ವಿ ಗುಡುಗಿದ್ದಾರೆ.
‘ಉದ್ದೇಶಿತ ಕಾನೂನು ಕರಾಳ ಕಾಯ್ದೆಯಾಗಿದೆ. ಇದು ಪೊಲೀಸರಿಗೆ ಪರಮಾಧಿಕಾರ ನೀಡುತ್ತದೆ. ಒಂದು ದಿನ ಪೊಲೀಸರು ಮನೆಗೆ ನುಗ್ಗಿ, ಅವರ ಮೇಲೆ ಕೈ ಮಾಡಿದಾಗ ನಿತೀಶ್ ಕುಮಾರ್ ಅವರಿಗೆ ತಾವು ಜಾರಿಗೊಳಿದ ಕಾಯ್ದೆ ಎಷ್ಟು ಕ್ರೂರ ಎಂಬುದು ಅರ್ಥವಾಗುವುದು’ ಎಂದೂ ತೇಜಸ್ವಿ ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.