
ನವದೆಹಲಿ: ‘ಇತಿಹಾಸ ತಿರುಚುವುದರಲ್ಲಿ ಪ್ರಧಾನಿ ಮೋದಿ ನಿಸ್ಸೀಮರು’ ಎಂದು ಕಾಂಗ್ರೆಸ್ ಶುಕ್ರವಾರ ಟೀಕಿಸಿದೆ.
ಸಂಸತ್ತಿನಲ್ಲಿ ಕಳೆದ ತಿಂಗಳು ನಡೆದ ವಂದೇ ಮಾತರಂ ಗೀತೆ ಕುರಿತ ಚರ್ಚೆಯಲ್ಲಿ, ರಾಷ್ಟ್ರಗೀತೆಯ ಇತಿಹಾಸವನ್ನು ವಿರೂಪಗೊಳಿಸಲು ಹಾಗೂ ರವೀಂದ್ರನಾಥ ಟ್ಯಾಗೋರ್ ಅವರಿಗೆ ‘ಅಪಖ್ಯಾತಿ’ ತರಲು ಯತ್ನಿಸಿದರು ಎಂದು ದೂರಿದೆ.
‘ಮಹಾತ್ಮ ಗಾಂಧಿ ಅವರ ಸ್ಮರಣೆ ಮತ್ತು ಪರಂಪರೆಯನ್ನು ಪ್ರಧಾನಿ ವ್ಯವಸ್ಥಿತವಾಗಿ ಕೆಡವುತ್ತಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 129ನೇ ಜನ್ಮದಿನಾಚರಣೆಯಂದು ರಮೇಶ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ.
‘ಜ.23 ನೇತಾಜಿಯ ಜನ್ಮದಿನ. 1937ರಲ್ಲಿ ವಂದೇ ಮಾತರಂ ಗೀತೆಯಲ್ಲಿನ ಸಾಲುಗಳ ವಿವಾದವನ್ನು ಪರಿಹರಿಸಲು ಬೋಸ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಸಂಸತ್ತಿನಲ್ಲಿ ಚರ್ಚೆಯ ವೇಳೆ ಪ್ರಧಾನಿ ಮೋದಿ ಅವರು ಉದ್ದೇಶಪೂರ್ವಕವಾಗಿ ಈ ವಿಷಯವನ್ನು ನಿಗ್ರಹಿಸಿದರು’ ಎಂದಿದ್ದಾರೆ.
ಬೋಸ್ ಪಾತ್ರದ ಕುರಿತಂತೆ ಅವರ ಮೊಮ್ಮಗ, ಇತಿಹಾಸಕಾರ ಸುಗತ ಬೋಸ್ ಅವರೇ ಉಲ್ಲೇಖಿಸಿದ್ದಾರೆ. ಆದರೂ, ಬಿಜೆಪಿ ಮುಖಂಡರು ಇತಿಹಾಸ ತಿರುಚುವುದರಲ್ಲಿ ನಿರತರಾಗಿದ್ದಾರೆ ಎಂದು ಜೈರಾಮ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.