
ಪ್ರಧಾನಿ ಮೋದಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಸೋಮವಾರ ಜಂಟಿ ಮಾಧ್ಯಮಗೋಷ್ಟಿ ನಡೆಸಿದರು
–ಪಿಟಿಐ ಚಿತ್ರ
ನವದೆಹಲಿ: ರಕ್ಷಣೆ ಹಾಗೂ ಹಿಂದೂ ಮಹಾಸಾಗರ–ಪೆಸಿಫಿಕ್ ಸುರಕ್ಷತೆ ವಿಚಾರದಲ್ಲಿ ಹೆಚ್ಚಿನ ಸಹಭಾಗಿತ್ವ ಸೇರಿ ಹಲವು ವಿಷಯಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೋಮವಾರ ಆರು ಒಪ್ಪಂದಗಳು ಏರ್ಪಟ್ಟವು. ಇದೇ ವೇಳೆ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಖಾಲಿಸ್ತಾನಿ ಪರ ಚಟುವಟಿಕೆಗಳ ಬಗ್ಗೆಯೂ ಭಾರತ ಕಳವಳ ವ್ಯಕ್ತಪಡಿಸಿತು.
ಎರಡೂ ದೇಶಗಳ ಹಣಕಾಸಿನ ಒಪ್ಪಂದಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಐದು ದಿನಗಳ ಭೇಟಿಗಾಗಿ ಭಾರತಕ್ಕೆ ಭಾನುವಾರ ಬಂದಿದ್ದರು.
‘2019ರಲ್ಲಿ ಕ್ರಿಸ್ಟ್‌ಚರ್ಚ್ ಮೇಲೆ ಹಾಗೂ ಮುಂಬೈನಲ್ಲಿ ನಡೆದ ದಾಳಿ ಒಪ್ಪತಕ್ಕ ವಿಚಾರಗಳಲ್ಲ. ಅಂತೆಯೇ ನ್ಯೂಜಿಲೆಂಡ್‌ನಲ್ಲಿ ಕೆಲವು ದುಷ್ಕರ್ಮಿಗಳು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದೂ ಕಳವಳಕಾರಿ ವಿಚಾರ. ಈ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯೂಜಿಲೆಂಡ್ ಸರ್ಕಾರವು ನಮಗೆ ಸಹಕಾರ ನೀಡುತ್ತದೆ ಎಂದು ನಾವು ನಂಬಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ಪ್ರತಿಪಾದಿಸಿದರು.
‘ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಾವು ನಮ್ಮ ಮಿತ್ರ ದೇಶಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ. ನಮ್ಮ ಕಳವಳವನ್ನು ನ್ಯೂಜಿಲೆಂಡ್ ಕೇಳಿಸಿಕೊಂಡಿದೆ ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆಯೂ ಹೇಳಿದೆ. ಕ್ರಮ ಕೈಗೊಳ್ಳುವುದಾಗಿ ಈ ಬಾರಿಯೂ ಅದು ಹೇಳಿದೆ’ ಎಂದು ವಿದೇಶಾಂಗ ಸಚಿವಾಲಯದ (ಪೂರ್ವ) ಕಾರ್ಯದರ್ಶಿ ಜೈದೀಪ್ ಮಜುಂದಾರ್ ಹೇಳಿದರು.
‘ಎರಡೂ ದೇಶಗಳು ಅಭಿವೃದ್ಧಿಗೆ ಪೂರಕವಾದ ನೀತಿಯಲ್ಲಿ ನಂಬಿಕೆ ಇಟ್ಟಿದ್ದೇವೆ ಹೊರತು, ಗಡಿ ವಿಸ್ತರಣೆಗೆ ಪೂರಕವಾದ ನೀತಿಗಳಿಗಲ್ಲ’ ಎಂದರು. ಇಂಡೊ–ಪೆಸಿಫಿಕ್ ಸಾಗರದಲ್ಲಿ ಚೀನಾದ ಕಾರ್ಯಚಟುವಟಿಕೆಗಳ ಕುರಿತು ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದರು. ‘ಇಂಡೊ–ಪೆಸಿಫಿಕ್ ಪ್ರದೇಶವನ್ನು ಸುರಕ್ಷಿತವಾಗಿರಿಸುವಲ್ಲಿ ಎರಡೂ ದೇಶಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಬಗ್ಗೆ ನಮಗೆ ಬಲವಾದ ಬದ್ಧತೆ ಇದೆ. ಈ ಬಗ್ಗೆ ನಾನು ಹಾಗೂ ಮೋದಿ ಅವರು ಮಾತುಕತೆ ನಡೆಸಿದ್ದೇವೆ’ ಎಂದು ಪ್ರಧಾನಿ ಲಕ್ಸನ್ ಹೇಳಿದರು.
ಶಿಕ್ಷಣ, ಕ್ರೀಡೆ, ಕೃಷಿ ಮತ್ತು ಹವಾಮಾನ ಬದಲಾವಣೆ, ಡಿಜಿಟಲ್ ಪಾವತಿ ಕ್ಷೇತ್ರಗಳಿಗೆ ಸಂಬಂಧಿಸಿ ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್‌ಟಿರ) ಏರ್ಪಟ್ಟವು. ಗಾಜಾಗೆ ಎಲ್ಲ ರೀತಿಯ ಮಾನವೀಯ ನೆರವು ದೊರೆಯಬೇಕು. ಉಕ್ರೇನ್–ರಷ್ಯಾ ಯುದ್ಧ ಕೊನೆಗೊಳ್ಳುವ ಬಗ್ಗೆ ಇಬ್ಬರೂ ನಾಯಕರು ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.