ADVERTISEMENT

‘ಗಂಗಾ ವಿಲಾಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 18:27 IST
Last Updated 13 ಜನವರಿ 2023, 18:27 IST
ಎಂವಿ ಗಂಗಾ ವಿಲಾಸ್‌ ನೌಕೆ
ಎಂವಿ ಗಂಗಾ ವಿಲಾಸ್‌ ನೌಕೆ   

ಲಖನೌ: ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರ ನೌಕೆ ‘ಎಂವಿ ಗಂಗಾ ವಿಲಾಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು.

‘ನೌಕೆಯಲ್ಲಿ ವಿಹಾರಕ್ಕಾಗಿ ವಿದೇಶಕ್ಕೆ ತೆರಳುವವರು ಇನ್ನು ಮುಂದೆ ಭಾರತದಲ್ಲಿಯೇ ಈ ಸೌಲಭ್ಯ ಪಡೆಯಬಹುದು. ನಾವು ಇಂಥ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದ್ದೇವೆ. ಇದು ದೇಶ ಮತ್ತು ಅದರ ವೈವಿಧ್ಯತೆಯನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಉತ್ತರ ಪ್ರದೇಶದ ವಾರಾಣಸಿಯಿಂದ ಆರಂಭಗೊಳ್ಳುವ ಯಾತ್ರೆಯು 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ. 3,200 ಕಿ.ಮೀ ಹಾದಿಯ ಉದ್ದಕ್ಕೂ ಪಟ್ನಾ, ಕೋಲ್ಕತ್ತ, ಗುವಾಹಟಿ ಮತ್ತು ಬಾಂಗ್ಲಾದೇಶದ ಢಾಕಾ ಸೇರಿ 50 ನಗರ ಮತ್ತು ವಿವಿಧ ಪ್ರವಾಸಿತಾಣಗಳಿಗೆ ‘ಗಂಗಾ ವಿಲಾಸ್‌’ ನೌಕೆಯು ಭೇಟಿ ನೀಡಲಿದೆ. ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಈ ವಿಹಾರದ ಹಾದಿಯಲ್ಲಿ ಇವೆ. ಬಾಂಗ್ಲಾದೇಶದ ನದಿ ಸೇರಿ ಒಟ್ಟು ಮೂರು ನದಿಗಳ ಮೂಲಕ ನೌಕೆಯು ಸಾಗಲಿದೆ.

ADVERTISEMENT

ಎಂವಿ ಗಂಗಾದ ಪ್ರಥಮ ಯಾತ್ರೆಯಲ್ಲಿ ಸ್ವಿಟ್ಜರ್ಲೆಂಡ್‌ನ 23 ಪ್ರವಾಸಿಗರು ಯಾತ್ರೆ ಆರಂಭಿಸಿದ್ದಾರೆ. ಪ್ರವಾಸಿಗರಿಗೆ ವಾರಾಣಸಿ ಜಲೇಬಿ, ಕಚೋರಿ ಸೇರಿ ದೇಶೀಯ ಸಿಹಿತಿನಿಸುಗಳನ್ನು ನೀಡಲಾಗುತ್ತದೆ. ವಿಶ್ವ ಪ್ರಸಿದ್ಧ ಅಸ್ಸಾಂ ಚಹಾದ ಕೇಂದ್ರವಾಗಿರುವ ದಿಬ್ರೂಗಢ
ದಲ್ಲಿ ಯಾತ್ರೆಯು ಮೇ 1ರಂದು ಪೂರ್ಣಗೊಳ್ಳಲಿದೆ.

ಪ್ರಯಾಣ ವೆಚ್ಚ ₹20 ಲಕ್ಷ!: ಈ ಐಷಾರಾಮಿ ನೌಕೆಯಲ್ಲಿ ಪ್ರಯಾಣಿಸಲು ಪ್ರತಿ ಪ್ರಯಾಣಿಕರಿಗೆ ದಿನಕ್ಕೆ ₹25,000ದಂತೆ 51 ದಿನಕ್ಕೆ ₹20 ಲಕ್ಷ ವಿಧಿಸಲಾಗುತ್ತದೆ.

ವಾರಾಣಸಿಯಲ್ಲಿ ನಿರ್ಮಾಣವಾಗಿರುವ ಟೆಂಟ್‌ ನಗರವನ್ನೂ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ₹1000 ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಒಳನಾಡು ಜಲಸಾರಿಗೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪವಿತ್ರ ನಗರದ ಗಂಗಾ ನದಿಯ ದಡದಲ್ಲಿರುವ ಪ್ರಸಿದ್ಧ ಘಾಟ್‌ಗಳ ಎದುರು ಟೆಂಟ್‌ ನಗರವನ್ನು ನಿರ್ಮಿಸಲಾಗಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಾರಾಣಸಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಈ ಟೆಂಟ್ ಸಿಟಿಯು, ಪ್ರವಾಸಿಗರಿಗೆ ವಸತಿ ಸೌಕರ್ಯವನ್ನು ಒದಗಿಸುತ್ತದೆ. ಇಲ್ಲಿ ಶಾಸ್ತ್ರೀಯ ಸಂಗೀತ, ಯೋಗ ಮತ್ತಿತರ ಮನರಂಜನಾ ಕಾರ್ಯಕ್ರಮಗಳೂ ಇರಲಿವೆ. ಪ್ರವಾಸಿಗರು ಬೋಟ್‌ಗಳ ಮೂಲಕ ಈ ನಗರವನ್ನು ತಲುಪಬಹುದು.

ಟೆಂಟ್‌ ನಗರವು ಅಕ್ಟೋಬರ್‌ನಿಂದ ಜೂನ್‌ವರೆಗೆ ಪ್ರವಾಸಿಗರಿಗೆ ಲಭ್ಯವಿರಲಿದೆ. ಅನಂತರ ಮಳೆಗಾಲದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಕಾರಣ ಮೂರು ತಿಂಗಳು ಈ ಸೌಲಭ್ಯ ಲಭ್ಯವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.