ADVERTISEMENT

5 ದೇಶಗಳಿಗೆ ಮೋದಿ ಪ್ರವಾಸಕ್ಕೆ ₹67 ಕೋಟಿ ವೆಚ್ಚ!

ಪ್ರಧಾನಿ ಮೋದಿ ವಿದೇಶ ಪ್ರವಾಸ: 2021–24ರ ವರೆಗೆ ₹295 ಕೋಟಿ ಖರ್ಚು

ಪಿಟಿಐ
Published 24 ಜುಲೈ 2025, 23:30 IST
Last Updated 24 ಜುಲೈ 2025, 23:30 IST
–
   

ನವದೆಹಲಿ: ಅಮೆರಿಕ ಹಾಗೂ ಫ್ರಾನ್ಸ್‌ಗೆ ನೀಡಿದ ಭೇಟಿಯೂ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ವರ್ಷ ವಿವಿಧ ದೇಶಗಳಿಗೆ ಕೈಗೊಂಡಿರುವ ಪ್ರವಾಸಕ್ಕೆ  ಈ ವರೆಗೆ ₹67 ಕೋಟಿ ವೆಚ್ಚವಾಗಿದೆ.

2021ರಿಂದ 2024ರ ವರಗಿನ ಅವಧಿಯಲ್ಲಿ ಅವರು ಕೈಗೊಂಡಿದ್ದ ವಿದೇಶ ಪ್ರವಾಸಗಳಿಗೆ ತಗುಲಿದ ಒಟ್ಟು ವೆಚ್ಚ ₹295 ಕೋಟಿ ಎಂದು ಕೇಂದ್ರ ಸರ್ಕಾರ ನೀಡಿರುವ ದತ್ತಾಂಶ ಹೇಳುತ್ತವೆ.

ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಅವರ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಅವರು ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ADVERTISEMENT

ಆದರೆ, ಮಾರಿಷಸ್‌, ಸೈಪ್ರಸ್‌, ಕೆನಡಾ, ಕ್ರೊಯೇಷಿಯಾ, ಘಾನಾ, ಟ್ರಿನಿಡಾಡ್‌ ಮತ್ತು ಟೊಬ್ಯಾಗೊ, ಅರ್ಜೆಂಟಿನಾ, ಬ್ರೆಜಿಲ್ ಹಾಗೂ ನಮೀಬಿಯಾಕ್ಕೆ ಈ ವರ್ಷ ನೀಡಿರುವ ಭೇಟಿಗೆ ಸಂಬಂಧಿಸಿದ ವೆಚ್ಚದ ಮಾಹಿತಿ ಲಭ್ಯವಿಲ್ಲ.

ಈ ವರ್ಷ ಕೈಗೊಂಡಿದ್ದ ಫ್ರಾನ್ಸ್‌ ಪ್ರವಾಸಕ್ಕೆ ₹25 ಕೋಟಿ ಖರ್ಚಾಗಿದೆ. ಇದು ಈ ವರ್ಷ ಮಾಡಲಾದ ಗರಿಷ್ಠ ವೆಚ್ಚವಾಗಿದೆ. 2023ರಲ್ಲಿ ಕೈಗೊಂಡಿದ್ದ ಅಮೆರಿಕ ಪ್ರವಾಸಕ್ಕೆ ₹22 ಕೋಟಿ ವೆಚ್ಚವಾಗಿತ್ತು ಎಂದು ಸಚಿವ ಸಿಂಗ್‌ ಮಾಹಿತಿ ನೀಡಿದ್ದಾರೆ. 

2022ರ ಮೇ ಮತ್ತು 2024ರ ಡಿಸೆಂಬರ್‌ ನಡುವೆ ಮೋದಿ ಅವರು 38 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು ₹258 ಕೋಟಿ ವೆಚ್ಚವಾಗಿದೆ. ಥಾಯ್ಲೆಂಡ್‌ ಪ್ರವಾಸಕ್ಕೆ ₹4.92 ಕೋಟಿ, ಶ್ರೀಲಂಕಾ ಹಾಗೂ ಸೌದಿ ಅರೇಬಿಯಾ ಭೇಟಿಗೆ ಕ್ರಮವಾಗಿ ₹4.26 ಕೋಟಿ ಹಾಗೂ ₹15 ಕೋಟಿ ಖರ್ಚಾಗಿದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.