ADVERTISEMENT

ಮತದಾರರ ಮನ ಅರಿಯಲು ಗುಪ್ತಚರ ಇಲಾಖೆಗೆ ಕೇಂದ್ರ ಸರ್ಕಾರದ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 10:26 IST
Last Updated 13 ಡಿಸೆಂಬರ್ 2018, 10:26 IST
   

ಬೆಂಗಳೂರು: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯ ನಂತರ ಮೋದಿ ಸರ್ಕಾರದ ಉನ್ನತ ವಲಯಗಳು ಚುರುಕಾಗಿವೆ.

ಈ ಕುರಿತು ಚರ್ಚಿಸಲು ಮಂಗಳವಾರ ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್ ಬ್ಯೂರೊ- ಐಬಿ) ಅಧಿಕಾರಿಗಳ ತುರ್ತು ಸಭೆ ನಡೆಯಿತು. ‘2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನಃಸ್ಥಿತಿ (ಮೂಡ್) ಅರಿಯುವ ಕೆಲಸ ಶುರು ಮಾಡಿ’ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸರ್ಕಾರದ ಸೂಚಿಸಿದೆ ಎಂದು ಉನ್ನತ ಮೂಲಗಳ ಹೇಳಿಕೆ ಆಧರಿಸಿ ‘ದಿಪ್ರಿಂಟ್’ ಜಾಲತಾಣ ಬುಧವಾರ ವರದಿ ಮಾಡಿದೆ.

2019ರ ಚುನಾವಣೆಯ ಸಂಭಾವ್ಯ ತಿರುವುಗಳ ಬಗ್ಗೆ ಅಧ್ಯಯನ ನಡೆಸಿ ವಿಸ್ತೃತ ವರದಿ ಸಲ್ಲಿಸುವಂತೆ ಗುಪ್ತಚರ ಇಲಾಖೆಗೆ ಸೂಚಿಸಿದೆ. ಚುನಾವಣೆಯನ್ನು ಪ್ರಭಾವಿಸಬಹುದಾದ ಅಂಶಗಳ ಬಗ್ಗೆಯೂ ಮಾಹಿತಿ ಕಲೆಹಾಕುವಂತೆ ನಿರ್ದೇಶನ ನೀಡಿದೆ ಎಂದು ‘ದಿಪ್ರಿಂಟ್’ ವರದಿ ಹೇಳಿದೆ.

ADVERTISEMENT

ವಿಧಾನಸಭೆ ಚುನಾವಣೆಗೆ ಮೊದಲು ಗುಪ್ತಚರ ಇಲಾಖೆ ನೀಡಿದ್ದ ವರದಿಗಳನ್ನು ವಿಶ್ಲೇಷಿಸುವಂತೆ, ವರದಿ ಸಿದ್ಧಪಡಿಸುವಾಗ ಆಗಿರುವ ತಪ್ಪುಗಳನ್ನು ಪತ್ತೆಹಚ್ಚಿ ಮುಂದೆ ಅಂಥ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ.

‘ಸರ್ಕಾರ ಈಗ ಎಲೆಕ್ಷನ್ ಮೂಡ್‌ನಲ್ಲಿದೆ. 2019ಕ್ಕೆ ಸಿದ್ಧತೆಗಳು ಚುರುಕಾಗಿ ಸಾಗುತ್ತಿವೆ. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಉನ್ನತ ನಾಯಕರಿಗೆ ಇಷ್ಟವಿಲ್ಲ. ಈ ವಿಷಯವನ್ನು ಪಕ್ಷದ ಎಲ್ಲ ಸದಸ್ಯರಿಗೆ ತಿಳಿಸಲಾಗಿದೆ. ಚುನಾವಣೆಯನ್ನು ನಿರ್ವಹಿಸಿದ ರೀತಿ, ಅನುಸರಿಸಿದ ಕಾರ್ಯತಂತ್ರ, ಈ ಸಂದರ್ಭದಲ್ಲಿ ಸಲ್ಲಿಕೆಯಾಗಿದ್ದ ವರದಿಗಳು, ಅವುಗಳನ್ನು ಆಧರಿಸಿ ಮಾಡಿಕೊಂಡಿದ್ದ ಸಿದ್ಧತೆಗಳನ್ನು ವಿಶ್ಲೇಷಿಸಿ 2019ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲಾಗುವುದು’ ಎನ್ನುವ ಹೆಸರು ಹೇಳಲು ಇಚ್ಛಿಸದ ಉನ್ನತ ಮೂಲದ ಹೇಳಿಕೆಯನ್ನು ‘ದಿಪ್ರಿಂಟ್’ ಉಲ್ಲೇಖಿಸಿದೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೆ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಮುಳುವಾಗಬಹುದು. ಆದರೆ ಛತ್ತೀಸಗಡ ಮತ್ತು ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಅಷ್ಟೇನೂ ಪರಿಣಾಮ ಬೀರದು. ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಇರುವ ಅಸಮಾಧಾನ ಮತ್ತು ನಿರುದ್ಯೋಗ ಛತ್ತೀಸಗಡದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಗುಪ್ತಚರ ಇಲಾಖೆ ವರದಿ ಸಲ್ಲಿಸಿತ್ತು ಎಂದು ಹೇಳಲಾಗಿದೆ.

ಸೋಲಿಗೆ ಏನು ಕಾರಣ: ಆತ್ಮಶೋಧನೆಯ ಹಾದಿಯಲ್ಲಿ ಬಿಜೆಪಿ

ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಇದು ಆ ಪ್ರಕ್ರಿಯೆಯ ಭಾಗ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

‘ಸೋಲಿಗೆ ಹಲವು ಕಾರಣಗಳಿವೆ. ಆಡಳಿತ ವಿರೋಧಿ ಅಲೆ ಪ್ರಮುಖ ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು. ಆದರೆ ಸೋಲನ್ನು ಒಪ್ಪಿಕೊಂಡು, ಅದರಿಂದ ಪಾಠ ಕಲಿತರೆ ಮಾತ್ರ ನಮ್ಮೆದುರು ಇರುವ ದೊಡ್ಡ ಗುರಿಯಾದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯ. ಮೋದಿ ಅವರನ್ನು ಕೇಂದ್ರವಾಗಿರಿಸಿಕೊಂಡು ಚುನಾವಣಾ ತಂತ್ರವನ್ನು ಈಗಾಗಲೇ ಹೆಣೆಯುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವು ಕ್ಷೇತ್ರಗಳ ಸೋಲಿನ ಅಂತರ ತೀರಾ ಕಡಿಮೆ ಇದೆ. ಇದರಿಂದಲೂ ನಾವು ಪಾಠ ಕಲಿಯುವುದು ಸಾಕಷ್ಟು ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.