ADVERTISEMENT

‌‌‌ಬಿಜೆಪಿ ಸರ್ಕಾರದಿಂದ ದೇಶದ ಆರೋಗ್ಯ ವ್ಯವಸ್ಥೆ ರೋಗಗ್ರಸ್ತ: ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಪಿಟಿಐ
Published 13 ಆಗಸ್ಟ್ 2023, 13:39 IST
Last Updated 13 ಆಗಸ್ಟ್ 2023, 13:39 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ‘ಏಮ್ಸ್‌’ನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನೊಳಗೊಂಡಂತೆ ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನು ‘ರೋಗಗ್ರಸ್ತ’ವನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ. 

ದೇಶದಲ್ಲಿನ 19 ಏಮ್ಸ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇರುವ ಕುರಿತು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಖರ್ಗೆ ಅವರು, ‘ಜನರು ಈಗ ಜಾಗೃತರಾಗಿದ್ದು ಮೋದಿ ನೇತೃತ್ವದ ಸರ್ಕಾರಕ್ಕೆ ‘ವಿದಾಯ’ದ ಕಾಲ ಸನ್ನಿಹಿತವಾಗಿದೆ’ ಎಂದೂ ಪ್ರತಿಪಾದಿಸಿದ್ದಾರೆ. 

‘ಲೂಟಿ ಮತ್ತು ಜುಮ್ಲಾಗಳು ದೇಶವನ್ನು ಅನಾರೋಗಕ್ಕೀಡು ಮಾಡಿವೆ. ಮೋದಿ ಅವರು ದೇಶದ ಹಲವೆಡೆ ‘ಏಮ್ಸ್‌’ಗಳನ್ನು ಸ್ಥಾಪಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರ ಪ್ರತಿ ಮಾತಿನಲ್ಲೂ ಸುಳ್ಳೇ ಅಡಗಿದೆ! ಸತ್ಯ ಏನೆಂದರೆ, ಏಮ್ಸ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ತೀವ್ರ ಕೊರತೆ ಇದೆ’ ಎಂದು ‘ಎಕ್ಸ್’ನಲ್ಲಿ (ಟ್ವಿಟ್ಟರ್) ಖರ್ಗೆ ಹೇಳಿದ್ದಾರೆ. 

ADVERTISEMENT

‘ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಿಮ್ಮ ಸಂವೇದನಾಶೂನ್ಯತೆಯಿಂದ ಹಿಡಿದು ಆಯುಷ್ಮಾನ್ ಭಾರತದವರೆಗೆ ಅನೇಕ ಹಗರಣಗಳು ನಡೆದವು. ನಿಮ್ಮ ನೇತೃತ್ವದ ಸರ್ಕಾರವು ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನೇ ‘ರೋಗಗ್ರಸ್ತ’ವನ್ನಾಗಿ ಮಾಡಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ. 

‘ಈ ನಿಟ್ಟಿನಲ್ಲಿ ಜನರು ಈಗ ಎಚ್ಚೆತ್ತುಕೊಂಡಿದ್ದು, ನಿಮ್ಮ ಮೋಸವನ್ನು ಗುರುತಿಸಲಾಗಿದೆ. ನಿಮ್ಮ ಸರ್ಕಾರಕ್ಕೆ ‘ವಿದಾಯ’ ಹೇಳುವ ಸಮಯವು ಸನ್ನಿಹಿತವಾಗಿದೆ’ ಎಂದೂ ಅವರು ಹೇಳಿದ್ದಾರೆ.

ಮಾಂಡವಿಯಾ ಪ್ರತಿಕ್ರಿಯೆ: ಖರ್ಗೆ ಅವರ ಆರೋಪಕ್ಕೆ ‘ಎಕ್ಸ್’ನಲ್ಲಿ ಸರಣಿಯಲ್ಲಿ ತಿರುಗೇಟು ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ‘ಕಾಂಗ್ರೆಸ್ ಅವಧಿಯಲ್ಲಿ ದೇಶದಲ್ಲಿ ಒಂದೇ ಏಮ್ಸ್ ಇತ್ತು. ಆದರೆ, ಮೋದಿ ನೇತೃತ್ವದ ಸರ್ಕಾರದಲ್ಲಿ 15 ಏಮ್ಸ್‌ಗಳನ್ನು ಆರಂಭಿಸಲಾಗಿದೆ’ ಎಂದಿದ್ದಾರೆ.

‘ನಮ್ಮ ಉದ್ದೇಶಗಳು ಶುದ್ಧ ಮತ್ತು ಸ್ಪಷ್ಟ. ನೀವು ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ. ಕಾಂಗ್ರೆಸ್‌ನ 50 ವರ್ಷಗಳ ಆಡಳಿತದಲ್ಲಿ ಒಂದು ಏಮ್ಸ್ ಮಾತ್ರ ಆರಂಭವಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಆರು ಏಮ್ಸ್‌ಗಳನ್ನು ಸ್ಥಾಪಿಸಲಾಗಿತ್ತು. ಈಗ ಮೋದಿ ಅವರ ಅವಧಿಯಲ್ಲಿ 15 ಹೊಸ ಏಮ್ಸ್‌ಗಳನ್ನು ಆರಂಭಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಏಮ್ಸ್’ನ ಅವಶ್ಯಕತೆಗೆ ಅನುಗುಣವಾಗಿ ಹೊಸ ವಿಭಾಗಗಳನ್ನು ತೆರೆದಾಗ ಹಂತಹಂತವಾಗಿ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಎಂದು ನಿರೀಕ್ಷೆ ಮಾಡುವೆ. ಮೋದಿ  ನೇತೃತ್ವದ ಸರ್ಕಾರವು ಹೊಸ ಏಮ್ಸ್‌ಗಳನ್ನು ಆರಂಭಿಸಿದೆ ಮತ್ತು ಅವುಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತೇವೆ. ಅದನ್ನು ನೀವು ಗಮನಿಸಿ, ನಮಗೆ ಸಲಹೆಗಳನ್ನು ನೀಡಿ’ ಎಂದೂ ಅವರು ತಿಳಿಸಿದ್ದಾರೆ.

‘ಯುಪಿಎ ಅವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಯಾವುದಾದರೂ ಒಂದು ಸಾಧನೆಯನ್ನು ತಿಳಿಸಿ’ ಎಂದೂ ಖರ್ಗೆ ಅವರಿಗೆ ಮಾಂಡವಿಯಾ ಸವಾಲು ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.