ADVERTISEMENT

ಮೊದಲ ಸುದ್ದಿಗೋಷ್ಠಿ: ಪ್ರಶ್ನೆಗಳಿಗೆ ಉತ್ತರಿಸದ ಪ್ರಧಾನಿ ಮೋದಿ

ಪಿಟಿಐ
Published 17 ಮೇ 2019, 20:30 IST
Last Updated 17 ಮೇ 2019, 20:30 IST
ಮೋದಿ
ಮೋದಿ   

ನವದೆಹಲಿ: 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಅವರು ಶುಕ್ರವಾರ ಮೊದಲ ಮಾಧ್ಯಮಗೋಷ್ಠಿ ನಡೆಸಿದರು. ಆದರೆ, ಮಾಧ್ಯಮ ಪ್ರತಿನಿಧಿಗಳ ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ.

ಬದಲಾಗಿ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರತ್ತ ಬೆರಳು ತೋರಿಸಿ, ‘ಇದು ನಮ್ಮ ಪಕ್ಷದ ಶಿಸ್ತು. ಅಧ್ಯಕ್ಷರೇ ಎಲ್ಲಾ ಪ‍್ರಶ್ನೆಗಳಿಗೆ ಉತ್ತರಿಸುತ್ತಾರೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳಷ್ಟೇ’ ಎಂದರು.

ಮಾಧ್ಯಮ ಪ್ರತಿನಿಧಿಗಳನ್ನು ಮೋದಿ ಭೇಟಿ ಮಾಡುವುದಿಲ್ಲ ಎಂಬ ಆರೋಪವನ್ನು ವಿರೋಧಪಕ್ಷಗಳು ಮಾಡುತ್ತಲೇ ಇವೆ. ಇದರ ನಡುವೆ, ಅಮಿತ್‌ ಶಾ ಜೊತೆ ಮಾಧ್ಯಮಗೋಷ್ಠಿಯಲ್ಲಿ ಕಾಣಿಸಿಕೊಂಡು ಮೋದಿ ಅಚ್ಚರಿ ಮೂಡಿಸಿದರು.

ADVERTISEMENT

ಆರಂಭದಲ್ಲಿ ಕೆಲವು ಮಾತುಗಳನ್ನಾಡಿದ ಅವರು, ‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೇಶದಾದ್ಯಂತ ಸಂಚರಿಸಿ ಜನರಿಗೆ ಧನ್ಯವಾದ ಹೇಳಿದ್ದೇನೆ. ಇಂದು ನಿಮ್ಮ ಮೂಲಕ ಜನರಿಗೆ ಮತ್ತೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ. ವಿವಿಧತೆ ಹಾಗೂ ಪ್ರಜಾತಂತ್ರದ ಮೂಲಕ ಭಾರತವು ಜಗತ್ತಿನ ಗಮನ ಸೆಳೆಯಬೇಕು’ ಎಂದರು.

‘ಚುನಾವಣೆಯ ಕಾರಣಕ್ಕೆ ಐಪಿಎಲ್‌ ಪಂದ್ಯಗಳನ್ನು ವಿದೇಶಕ್ಕೆ ಸ್ಥಳಾಂತರಿಸಿದ ಕಾಲವೊಂದಿತ್ತು. ಆದರೆ ಈಗ ದೇಶದಲ್ಲಿ ನವರಾತ್ರಿ, ರಾಮನವಮಿ, ಈಸ್ಟರ್‌, ರಂಜಾನ್‌, ಐಪಿಎಲ್‌, ಪರೀಕ್ಷೆಗಳು ಹಾಗೂ ಚುನಾವಣೆ ಏಕಕಾಲಕ್ಕೆ ನಡೆಯುತ್ತವೆ’ ಎಂದರು.

ಮೋದಿ ಅವರ ಮಾಧ್ಯಮಗೋಷ್ಠಿಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.‘ಮೋದಿ ಅವರೇ ಅಭಿನಂದನೆಗಳು. ಅತ್ಯುತ್ತಮ ಮಾಧ್ಯಮಗೋಷ್ಠಿ. ಕಾಣಿಸಿಕೊಳ್ಳುವುದರಿಂದಲೇ ಅರ್ಧ ಯುದ್ಧ ಗೆದ್ದಂತೆ. ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಲು ಅಮಿತ್‌ ಶಾ ಅವರು ಮುಂದಿನ ಬಾರಿ ನಿಮಗೆ ಅವಕಾಶ ನೀಡಬಹುದು’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.