ADVERTISEMENT

ಕೇರಳ| ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ: ಪ್ರಧಾನಿ

ಪಿಟಿಐ
Published 23 ಜನವರಿ 2026, 13:46 IST
Last Updated 23 ಜನವರಿ 2026, 13:46 IST
ತಿರುವನಂತಪುರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದರು. ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದ್ದರು  ‍ಪಿಟಿಐ ಚಿತ್ರ
ತಿರುವನಂತಪುರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದರು. ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದ್ದರು  ‍ಪಿಟಿಐ ಚಿತ್ರ   

ತಿರುವನಂತಪುರ: ‘ದಶಕಗಳಿಂದ ಆಳುತ್ತಿರುವ ಎಲ್‌ಡಿಎಫ್‌ ಹಾಗೂ ಯುಡಿಎಫ್‌ನ ಭ್ರಷ್ಟ ಆಡಳಿತದಿಂದ ಕೇರಳವನ್ನು ವಿಮೋಚನೆಗೊಳಿಸಲು ಜನರು ನಿಶ್ಚಯಿಸಿದ್ದಾರೆ. ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ರಾಜ್ಯದ ಜನರ ಈ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

‘ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಬದಲಾವಣೆಯ ಗಾಳಿ ಬೀಸಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ. ಈ ಬದಲಾವಣೆ ತಿರುವನಂತಪುರ ಮಹಾನಗರಪಾಲಿಕೆ ಚುನಾವಣೆಯಿಂದಲೇ ಆರಂಭವಾಗಿದೆ’ ಎಂದು ಹೇಳುವ ಮೂಲಕ ಅವರು, ಕೇರಳದಲ್ಲಿ ಚುನಾವಣಾ ಕಹಳೆಯನ್ನು ಮೊಳಗಿಸಿದ್ದಾರೆ. 

ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದಕ್ಕಾಗಿ ಇಲ್ಲಿನ ಪುತ್ತರಿಕಂಡಂ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ADVERTISEMENT

‘ನಾಲ್ಕು ದಶಕಗಳ ಹಿಂದೆ ಅಹಮದಾಬಾದ್‌ ಪಾಲಿಕೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆದ್ದಿತ್ತು. 1987ರಲ್ಲಿ ಈ ಪಾಲಿಕೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ, ಬಳಿಕ ಗುಜರಾತ್‌ನಲ್ಲಿ ಅಧಿಕಾರದ ಗದ್ದುಗೆಗೆ ಏರಿತು’ ಎಂದರು.

‘1987ಕ್ಕೂ ಮೊದಲು ಗುಜರಾತ್‌ನಲ್ಲಿ ಬಿಜೆಪಿ ನಿರ್ಲಕ್ಷಿತ ಪಕ್ಷವಾಗಿತ್ತು. ಮಾಧ್ಯಮಗಳು ಕೂಡ ಪಕ್ಷದ ಕಾರ್ಯಕ್ರಮಗಳ ಕುರಿತ ವರದಿ ಪ್ರಕಟಿಸುತ್ತಿದ್ದುದು ಅಪರೂಪ. ಒಂದು ಸ್ಥಾನ ಗೆದ್ದು, ನಂತರ ಗುಜರಾತ್‌ನಲ್ಲಿ ಅಧಿಕಾರಕ್ಕೆ ಏರಿರುವಂತೆ, ಕೇರಳದಲ್ಲಿಯೂ ಒಂದು ಸ್ಥಾನದಿಂದ ಪಕ್ಷದ ಪ್ರಯಾಣ ಆರಂಭವಾಗಿದೆ. ರಾಜ್ಯದ ಜನರು ಬಿಜೆಪಿಯಲ್ಲಿ ನಂಬಿಕೆ ಹೊಂದಿದ್ದು, ಇಲ್ಲಿಯೂ ಬಿಜೆಪಿ ಅಧಿಕಾರಕ್ಕೇರಲಿದೆ’ ಎಂದು ಮೋದಿ ಹೇಳಿದರು.

‘ಎಲ್‌ಡಿಎಫ್‌ ಹಾಗೂ ಯುಡಿಎಫ್‌ನ ನಿರ್ಲಕ್ಷದಿಂದಾಗಿ ತಿರುವನಂತಪುರ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ನಗರವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನಗರದ ಅಭಿವೃದ್ಧಿಗೆ ಬಿಜೆಪಿ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ದೇಶದಲ್ಲಿ ಇದು ಮಾದರಿ ನಗರವಾಗಲಿದೆ’ ಎಂದರು.

ತಿರುವನಂತಪುರದಲ್ಲಿ ಶುಕ್ರವಾರ ನಡೆದ ರೋಡ್‌ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರತ್ತ ಕೈಬೀಸಿದರು  ಪಿಟಿಐ ಚಿತ್ರ 
ತಿರುವನಂತಪುರ ಜನರು ಬಹುದಿನಗಳ ಹಿಂದೆಯೇ ಬದಲಾವಣೆ ಬಯಸಿದ್ದರು. ನಂಬಿಕೆ ಇಡಿ. ನೀವು ಬಯಸಿರುವ ಬದಲಾವಣೆ ನನಸಾಗಲಿದೆ
ನರೇಂದ್ರ ಮೋದಿ, ಪ್ರಧಾನಿ

3 ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ

ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಶುಕ್ರವಾರ ಹಸಿರು ನಿಶಾನೆ ತೋರಿದರು. ‘ನೂತನ ರೈಲುಗಳು ವಾರಕ್ಕೊಮ್ಮೆ ಸಂಚರಿಸಲಿದ್ದು ಕೇರಳ ತಮಿಳುನಾಡು ಕರ್ನಾಟಕ ತೆಲಂಗಾಣ ಹಾಗೂ ಆಂಧ್ರಪ್ರದೇಶಗಳ ನಡುವಿನ ಸಂಪರ್ಕ ಹೆಚ್ಚಲಿದೆ’ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ‘ಇದೇ ಮೊದಲ ಬಾರಿಗೆ ಕೇರಳದಲ್ಲಿ ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ರೈಲುಗಳ ವೇಳಾಪಟ್ಟಿ ಪ್ರಯಾಣದರ ಕುರಿತು ಶೀಘ್ರವೇ ಘೋಷಿಸಲಾಗುವುದು’ ಎಂದೂ ಹೇಳಿದೆ. ತಿರುವನಂತಪುರ ಸೆಂಟ್ರಲ್–ತಾಂಬರಮ್ ತಿರುವನಂತಪುರ ನಾರ್ತ್–ಚರ್ಲಪಲ್ಲಿ ನಾಗರಕೋಯಿಲ್‌–ಮಂಗಳೂರು ಅಮೃತ ಭಾರತ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರುನಿಶಾನೆ ತೋರಿಸಲಾಗಿದೆ. ಜೊತೆಗೆ ಗುರುವಾಯೂರು–ತ್ರಿಶ್ಶೂರು ಪ್ಯಾಸೆಂಜರ್‌ ರೈಲು ಸಂಚಾರಕ್ಕೂ ಮೋದಿ ಚಾಲನೆ ನೀಡಿದ್ದಾರೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಮೋದಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಜನರು ತೋರುವ ಪ್ರೀತಿಗೆ ‘ನಾಟಕ’ದ ಹಣೆಪಟ್ಟಿ...

‘ಜನರು ನನ್ನ ಕುರಿತಾಗಿ ವ್ಯಕ್ತಪಡಿಸುವ ಪ್ರೀತಿಗೆ ಕೆಲವರು ‘ನಾಟಕ’ ಅಥವಾ ‘ಪೂರ್ವಯೋಜಿತ’ ಎಂಬ ಹಣೆಪಟ್ಟಿ ಹಚ್ಚುತ್ತಾರೆ’ ಎಂದು ಮೋದಿ ಹೇಳಿದರು. ಇಲ್ಲಿ ನಡೆದ ಕಾರ್ಯಕ್ರಮದ ವೇಳೆ ಬಾಲಕನೊಬ್ಬ ಬಿಡಿಸಿದ್ದ ತಮ್ಮ ಭಾವಚಿತ್ರವನ್ನು ಗಮನಿಸಿದ ಬಳಿಕ ಮೋದಿ ಈ ಮಾತು ಹೇಳಿದರು. ‘ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಯುವ ಜನತೆ ಕೂಡ ನನ್ನ ಮೇಲಿನ ಪ್ರೀತಿಯನ್ನು ಇಂತಹ ವಿಧಾನಗಳ ಮೂಲಕ ವ್ಯಕ್ತಪಡಿಸುತ್ತಾರೆ. ಬಳಿಕ ರೀಲ್ಸ್‌ಗಳನ್ನು ಮಾಡಲಾಗುತ್ತದೆ. ನನ್ನ ವಿರೋಧಿಗಳು ಇಂತಹ ಘಟನೆಗಳನ್ನು ಪೂರ್ವಯೋಜಿತ ಇಲ್ಲವೇ ನಾಟಕ ಎಂದು ಕರೆಯುತ್ತಾರೆ’ ಎಂದರು. ‘ನನ್ನ ಬಗ್ಗೆ ನಿಮಗಿರುವ ಪ್ರೀತಿ ಮಕ್ಕಳು ಹೊಂದಿರುವ ಭಾವನೆಗಳು ನನಗೆ ಅರ್ಥವಾಗುತ್ತವೆ. ಇದೇ ಕಾರಣಕ್ಕೆ ನಾನು ಇಂತಹ ಎಲ್ಲ ಅವಮಾನಗಳನ್ನು ಸಹಿಸಿಕೊಳ್ಳುವೆ. ಆದರೆ ಚಿತ್ರ ರಚಿಸುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಬಾಲಕನನ್ನು ನಾನು ಅವಮಾನಿಸಲಾರೆ. ಆತ ನಿರಾಶೆಗೊಳ್ಳುವಂತೆ ಮಾಡಲಾರೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.