ADVERTISEMENT

ವರ್ತಕರಿಗೆ ಜಾಮೀನುರಹಿತ ಸಾಲ: ಮೋದಿ ಭರವಸೆ

ಪಿಟಿಐ
Published 19 ಏಪ್ರಿಲ್ 2019, 18:49 IST
Last Updated 19 ಏಪ್ರಿಲ್ 2019, 18:49 IST
   

ನವದೆಹಲಿ: ‘ಜಿಎಸ್‌ಟಿ ನೋಂದಣಿ ಹೊಂದಿರುವವರಿಗೆ ₹ 50 ಲಕ್ಷದವರೆಗೆ ಜಾಮೀನುರಹಿತ ಸಾಲ, ₹ 10 ಲಕ್ಷ ಮೊತ್ತದ ಅಪಘಾತ ವಿಮೆ ನೀಡುತ್ತೇವೆ. ವ್ಯಾಪಾರಿಗಳಿಗೆ ಕ್ರೆಡಿಟ್‌ ಕಾರ್ಡ್‌ ಮತ್ತು ಸಣ್ಣ ಅಂಗಡಿಯವರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶ್ವಾಸನೆ ನೀಡಿದ್ದಾರೆ.

ವ್ಯಾಪಾರಿಗಳು ಮತ್ತು ಉದ್ದಿಮೆದಾರರ ಜತೆ ನಡೆದ ಸಂವಾದದಲ್ಲಿ ಪ್ರಧಾನಿ ಈ ಭರವಸೆ ಕೊಟ್ಟಿದ್ದಾರೆ.

‘ಉದ್ಯಮಿಗಳು ಮತ್ತು ವ್ಯಾಪಾರಸ್ಥರು ದೇಶದ ಆರ್ಥಿಕತೆಯ ಬೆನ್ನೆಲುಬು. ಈ ವರ್ಗದ ಜನರ ಕೊಡುಗೆ ಇಲ್ಲದೆ ದೇಶದ ಆರ್ಥಿಕತೆಯನ್ನು ದುಪ್ಪಟ್ಟು ಮಾಡುವುದು ಸಾಧ್ಯವೇ ಇಲ್ಲ. ಕಾಂಗ್ರೆಸ್‌ ಇದನ್ನು ಅರ್ಥ ಮಾಡಿಕೊಂಡೇ ಇಲ್ಲ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

‘ಈ ವರ್ಗದ ಜನರಿಗೆ ದೊರೆಯಬೇಕಿದ್ದ ಗೌರವ ಮತ್ತು ಘನತೆಯನ್ನು ಕಾಂಗ್ರೆಸ್‌ ನೀಡಿಯೇ ಇಲ್ಲ. ವ್ಯಾಪಾರಸ್ಥರನ್ನು ‘ಕಳ್ಳರು’ ಎಂದೇಕಾಂಗ್ರೆಸ್‌ ಕರೆಯುತ್ತಿದೆ. ಭಾರತದ ಪಿತಾಮಹ ಮಹಾತ್ಮಾ ಗಾಂಧೀಜಿ ಸಹ ಬನಿಯಾ (ವ್ಯಾಪಾರಿ) ಸಮುದಾಯದವರು. ಕಾಂಗ್ರೆಸ್‌ ಮುಖ್ಯಸ್ಥರಿಗೆ ಇದೂ ಗೊತ್ತಿಲ್ಲ’ ಎಂದು ಅವರು ಹರಿಹಾಯ್ದಿದ್ದಾರೆ.

‘ವ್ಯಾಪಾರಿಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದು ಕಾಂಗ್ರೆಸ್‌ಗೆ ಗೊತ್ತಿಲ್ಲ. ವ್ಯಾಪಾರಿಗಳ ಇತಿಹಾಸವೂ ಅವರಿಗೆ ಗೊತ್ತಿಲ್ಲ. ಅವರನ್ನು ಗೌರವಿಸುವ ಬದಲು ಕಾಂಗ್ರೆಸ್‌ ಅವಮಾನ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

‘ಮೇ 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದು ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಆಗ ಮೇಲಿನ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುತ್ತದೆ. ಜತೆಗೆ ವ್ಯಾಪಾರಿಗಳ ಕಲ್ಯಾಣ ಮಂಡಳಿಯನ್ನು ರಚಿಸುತ್ತೇವೆ’ ಎಂದು ಮೋದಿ ಭರವಸೆ ನೀಡಿದ್ದಾರೆ.

‘ವ್ಯಾಪಾರಿಗಳ ಅನುಕೂಲಕ್ಕಾಗಿ ನಾನು 5 ವರ್ಷಗಳಲ್ಲಿ ಬಹಳ ದುಡಿದಿದ್ದೇನೆ. ನವೋದ್ಯಮಗಳಿಗೆ ಮುದ್ರಾ ಯೋಜನೆ ಜಾರಿಗೆ ತಂದಿದ್ದೇನೆ. ಉದ್ಯಮ ಸ್ಥಾಪನೆಗೆ ಇದ್ದ ತೊಡಕುಗಳನ್ನು ನಿವಾರಿಸಿದ್ದೇನೆ. 1,500 ನಿಯಮಾವಳಿಗಳನ್ನು ರದ್ದು ಮಾಡಿ, ಸರಳ ನಿಯಮಗಳನ್ನು ಜಾರಿಗೆ ತಂದಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.