ADVERTISEMENT

ಹಿಂದೂ ಧರ್ಮದ ಜ್ಞಾನ ಎಲ್ಲಿಂದ ಬಂತು: ಕಾಂಗ್ರೆಸ್ಸಿಗರ ಛೇಡಿಸಿದ ಮೋದಿ

ಪಿಟಿಐ
Published 3 ಡಿಸೆಂಬರ್ 2018, 20:00 IST
Last Updated 3 ಡಿಸೆಂಬರ್ 2018, 20:00 IST
   

ಜೋಧಪುರ: ‘ಹಿಂದೂ ಧರ್ಮದ ಬಗ್ಗೆ ಇಷ್ಟೊಂದು ಜ್ಞಾನ ನಿಮಗೆ ಎಲ್ಲಿಂದ ಬಂತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದ್ದಾರೆ.

‘ಮೋದಿ ಅವರಿಗೆ ಹಿಂದೂ ಧರ್ಮದ ಜ್ಞಾನಎಳ್ಳಷ್ಟೂ ಇಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು.

‘ಹಿಂದೂ ಧರ್ಮದ ಬಗ್ಗೆ ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದು ಅವರು ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ADVERTISEMENT

‘ಹಿಂದೂ ಧರ್ಮದ ಬಗ್ಗೆ ಇರುವ ಜ್ಞಾನ ನೋಡಿ ಯಾರೂ ಮತ ಕೊಡುವುದಿಲ್ಲ. ನೀರು, ವಿದ್ಯುತ್‌, ರಸ್ತೆ ಮುಂತಾದ ಕೆಲಸ ನೋಡಿ ಮತ ಕೊಡುತ್ತಾರೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ತಾವು ಧರಿಸುತ್ತಿದ್ದ ಕೋಟಿನಲ್ಲಿ ಸದಾ ಗುಲಾಬಿ ಇಟ್ಟುಕೊಳ್ಳುತ್ತಿದ್ದ ಪ್ರಧಾನಿಯೊಬ್ಬರಿಗೆ ಉದ್ಯಾನಗಳ ಬಗ್ಗೆ ಪಾಂಡಿತ್ಯವಿತ್ತೇ ಹೊರತು ರೈತರ ಕಷ್ಟ ಮತ್ತು ಕೃಷಿ ಸಮಸ್ಯೆಗಳ ಬಗ್ಗೆ ಎಳ್ಳಷ್ಟೂ ಜ್ಞಾನ ಇರಲಿಲ್ಲ’ ಎಂದು ನೆಹರೂ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

‘ಮೋದಿ, ಕೆಸಿಆರ್‌, ಓವೈಸಿ ಎಲ್ಲರೂ ಒಂದೇ’

ಗದ್ವಾಲ್‌/ ತಾಂಡೂರ್‌ (ತೆಲಂಗಾಣ): ತೆಲಂಗಾಣದಲ್ಲಿ ಟಿಆರ್‌ಎಸ್‌, ಬಿಜೆಪಿ ಮತ್ತು ಅಸಾದುದ್ದಿನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ, ಟಿಆರ್‌ಎಸ್‌ ನಾಯಕ ಕೆ. ಚಂದ್ರಶೇಖರ್‌ ರಾವ್‌ ಮತ್ತು ಎಐಎಂಐಎಂ ನಾಯಕ ಅಸಾದುದ್ದಿನ್‌ ಒವೈಸಿ ಎಲ್ಲರೂ ಒಳಗಿನಿಂದ ಒಂದೇ. ಅವರಿಂದ ಮೋಸ ಹೋಗಬೇಡಿ’ ಎಂದು ಮತದಾರರಿಗೆ ರಾಹುಲ್‌ ಮನವಿ ಮಾಡಿದ್ದಾರೆ.

ಟಿಆರ್‌ಎಸ್‌ ಪಕ್ಷವು ಬಿಜೆಪಿಯ ‘ಬಿ’ ಟೀಮ್‌ ಆದರೆ, ಒವೈಸಿ ಅವರ ಎಐಎಂಐಎಂ ಪಕ್ಷ ಬಿಜೆಪಿಯ ‘ಸಿ’ ಟೀಮ್‌ ಎಂದು ರಾಹುಲ್‌ ಲೇವಡಿ ಮಾಡಿದರು.

‘ಪ್ರಧಾನಿ ಮೋದಿ ಅವರು ದೇಶವನ್ನು ಇಬ್ಭಾಗ ಮಾಡಿದ್ದಾರೆ. ಒಂದು ಹನಿ ಬೆವರು ಸುರಿಸದೆ ₹30 ಸಾವಿರ ಕೋಟಿ ಜೇಬಿಗಿಳಿಸಿದ ಅನಿಲ್‌ ಅಂಬಾನಿಗೆ ಒಂದು ಹಿಂದುಸ್ತಾನ. ನಾಲ್ಕು ತಿಂಗಳು ಹಗಲು–ರಾತ್ರಿ ಬೆವರು ಸುರಿಸಿ ₹1,040 ಗಳಿಸಿದ ಈರುಳ್ಳಿ ಬೆಳೆಗಾರ ರೈತರಿಗೆ ಮತ್ತೊಂದು ಹಿಂದುಸ್ತಾನ’ ಎಂದುವ್ಯಂಗ್ಯವಾಡಿದ್ದಾರೆ.

*ನಾನು ಬಿಜೆಪಿ ಅಥವಾ ಕಾಂಗ್ರೆಸ್‌ ಏಜೆಂಟ್ ಅಲ್ಲ. ತೆಲಂಗಾಣದ ಏಜೆಂಟ್‌
– ಕೆ. ಚಂದ್ರಶೇಖರ್ ರಾವ್‌,ಟಿಆರ್‌ಎಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.