
ಮದುರಾಂತಕಂ: ‘ತಮಿಳುನಾಡಿನಲ್ಲಿನ ಡಿಎಂಕೆ ನೇತೃತ್ವದ ಸರ್ಕಾರವು ಭ್ರಷ್ಟಾಚಾರ, ಮಾಫಿಯಾ ಹಾಗೂ ಅಪರಾಧ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ, ಈ ಸರ್ಕಾರ ಪತನಗೊಳ್ಳುವುದಕ್ಕೆ ದಿನಗಣನೆ ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ನಗರದಲ್ಲಿ ಎನ್‌ಡಿಎ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು,‘ಡಿಎಂಕೆಗೆ ರಾಜ್ಯದ ಜನರು ಎರಡು ಬಾರಿ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, ಆ ಪಕ್ಷವು ಈಗ ಜನರ ನಂಬಿಕೆಯನ್ನು ಕಳೆದುಕೊಂಡಿದೆ’ ಎಂದು ಹೇಳಿದರು.
ತಿರುಪರನ್‌ಕುಂಡ್ರಂ ಕಾರ್ತಿಕ ದೀಪ ಬೆಳಗುವ ಕುರಿತ ವಿವಾದ ಪ್ರಸ್ತಾಪಿಸಿದ ಅವರು,‘ಚುನಾವಣೆ ಲಾಭಕ್ಕಾಗಿ ಇಲ್ಲಿನ ಆರಾಧ್ಯದೈವ ಮುರುಗನ್ ಹಾಗೂ ನ್ಯಾಯಾಲಯಗಳಿಗೆ ಡಿಎಂಕೆ ಸರ್ಕಾರ ಅವಮಾನ ಮಾಡಿದೆ’ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಸ್ಮರಿಸಿದ ಮೋದಿ,‘ಜಯಲಲಿತಾ ಅವರು ಅಪರಾಧಗಳನ್ನು ಮಟ್ಟಹಾಕಿದ್ದರು. ಈ ಸರ್ಕಾರದ ಅವಧಿಯಲ್ಲಿ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಆರೊಪಿಸಿದರು.
ವೇದಿಕೆಯಲ್ಲಿ, ಎನ್‌ಡಿಎ ಅಂಗಪಕ್ಷಗಳಾದ ಎಐಎಡಿಎಂಕೆ ಹಾಗೂ ಎಎಂಎಂಕೆ ನಾಯಕರು ಉಪಸ್ಥಿತರಿದ್ದರು. ಇದೇ ವೇಳೆ, ಮುರುಗನ್ ದೇವರ ಭಾವಚಿತ್ರವುಳ್ಳ ಸ್ಮರಣಿಕೆಯನ್ನು ಮೋದಿ ಅವರಿಗೆ ನೀಡಿ, ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.