ADVERTISEMENT

ಮೋದಿ ಅಲೆಯಲ್ಲಿ ತೇಲದ ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 23 ಮೇ 2019, 18:30 IST
Last Updated 23 ಮೇ 2019, 18:30 IST
ತಮಿಳುನಾಡಿನಲ್ಲಿ ಡಿಎಂಕೆ ಕಾರ್ಯಕರ್ತರು ಕರುಣಾನಿಧಿ, ಸ್ಟಾಲಿನ್ ಭಾವಚಿತ್ರ ಹಿಡಿದು ಸಂಭ್ರಮಿಸಿದರು
ತಮಿಳುನಾಡಿನಲ್ಲಿ ಡಿಎಂಕೆ ಕಾರ್ಯಕರ್ತರು ಕರುಣಾನಿಧಿ, ಸ್ಟಾಲಿನ್ ಭಾವಚಿತ್ರ ಹಿಡಿದು ಸಂಭ್ರಮಿಸಿದರು   

ಬೆಂಗಳೂರು/ಚೆನ್ನೈ: ಭಾರತದ ಬಹುತೇಕ ಭಾಗ ನರೇಂದ್ರ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. ಆದರೆ, ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಮೆರೆದಿರುವುದು ಗಮನಾರ್ಹ. ಕೇರಳದಲ್ಲಿ ಖಾತೆ ತೆರೆಯುವ ಬಿಜೆಪಿ ಪ್ರಯತ್ನ ಫಲ ಕೊಟ್ಟಿಲ್ಲ. ಕೇರಳದ ಜನರು ಕಾಂಗ್ರೆಸ್‌ ಪಕ್ಷದ ಜತೆಗೆ ಗಟ್ಟಿಯಾಗಿ ನಿಂತಿದ್ದಾರೆ.

ಲೋಕಸಭೆಯ ಒಟ್ಟು 543 ಕ್ಷೇತ್ರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು 130 ಸ್ಥಾನಗಳನ್ನು ಹಂಚಿಕೊಂಡಿವೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಬಹುಮತ ಗಳಿಸದೇ ಇದ್ದರೆ, ಕೇಂದ್ರದಲ್ಲಿ ದಕ್ಷಿಣದ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಈ ಸಲ ಬಿಜೆಪಿ ಅಗತ್ಯ ಬಹುಮತ ಗಳಿಸಿರುವುದರಿಂದ ಸರ್ಕಾರ ರಚನೆಯಲ್ಲಿ ದಕ್ಷಿಣದ ಪಕ್ಷಗಳಿಗೆ ಅಂತಹ ಮಹತ್ವವೇನೂ ಇಲ್ಲ. ಆದರೂ ಲೋಕಸಭೆಯಲ್ಲಿ ಈ ಭಾಗದ ಸಂಸದರ ಧ್ವನಿ ಉಡುಗಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಬಹುತೇಕ ಸ್ಥಾನಗಳನ್ನು ಬಾಚಿಕೊಂಡಿರುವ ಸ್ಟಾಲಿನ್‌ ನೇತೃತ್ವದ ಡಿಎಂಕೆ ಮೈತ್ರಿಕೂಟ ಸದನದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ADVERTISEMENT

ಉತ್ತರ ಭಾರತದ ರಾಜ್ಯಗಳ ರೀತಿಯಲ್ಲಿಯೇ ಕರ್ನಾಟಕದ ಬಹುಪಾಲು ಕ್ಷೇತ್ರಗಳು ಬಿಜೆಪಿಯ ಮಡಿಲಿಗೆ ಬಿದ್ದಿದೆ; ಮಹಾರಾಷ್ಟ್ರದಲ್ಲೂ ಬಿಜೆಪಿ– ಶಿವಸೇನಾ ಮೈತ್ರಿಕೂಟ ತನ್ನ ಭದ್ರಕೋಟೆ ಉಳಿಸಿಕೊಂಡಿದ್ದು ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚು ಸ್ಥಾನಗಳು ಲಭ್ಯವಾಗಿದೆ.

ಮುಂಬೈನ ಎಲ್ಲ ಆರು ಸ್ಥಾನಗಳನ್ನು ಬಿಜೆಪಿ–ಶಿವಸೇನಾ ಮೈತ್ರಿಕೂಟವು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಶರದ್‌ ಪವಾರ್‌ ಅವರ ಎನ್‌ಸಿಪಿ ಸಾಧನೆ ಹೇಳಿಕೊಳ್ಳುವಂತೇನೂ ಇಲ್ಲ.

ಮೋದಿ ಮೋಡಿಗೆ ಒಳಗಾಗದ ಬೆರಳೆಣಿಕೆಯ ರಾಜ್ಯಗಳ ಪೈಕಿ ತಮಿಳುನಾಡು ಪ್ರಮುಖವಾದದ್ದು.ಎಐಎಡಿಎಂಕೆ ಮತ್ತು ಡಿಎಂಕೆ ಅಧಿನಾಯಕರಾದ ಜಯಲಲಿತಾ ಮತ್ತು ಕರುಣಾನಿಧಿ ಅವರನ್ನು ಕಳೆದುಕೊಂಡ ಬಳಿಕ ಇಲ್ಲಿ ಲೋಕಸಭೆಗೆ ನಡೆದ ಮೊದಲ ಚುನಾವಣೆ ಇದು. ಇಲ್ಲಿ ಆಡಳಿತಾರೂಢ ಎಐಎಡಿಎಂಕೆ ತೀವ್ರ ಮುಖಭಂಗ ಅನುಭವಿಸಿದೆ.

ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟವು 1977ರ ಬಳಿಕ ಹೀನಾಯ ಸೋಲು ಕಂಡಿದೆ. 2014ರ ಚುನಾವಣೆಯಲ್ಲಿ 8 ಸ್ಥಾನ ಪಡೆದಿದ್ದ ಈ ಮೈತ್ರಿಕೂಟ ಈ ಸಲ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಕ್ಕೆ ಮತದಾರರು ಸಂಪೂರ್ಣವಾಗಿ ಒಲಿದಿದ್ದಾರೆ. ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದ ಬಿಜೆಪಿ ನಿಲುವು ಮತದಾರರನ್ನು ಆಕರ್ಷಿಸಲು
ಸಫಲವಾಗಿಲ್ಲ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಇರುವ ಪಟ್ಟಣಂತಿಟ್ಟದಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯ ನಾಯಕ ಕೆ. ಸುಂದರನ್‌ ಅವರೂ ಸೋತಿದ್ದಾರೆ.

ಶಬರಿಮಲೆ ಆಂದೋಲನದ ನೇತೃತ್ವವನ್ನು ಅವರು ವಹಿಸಿಕೊಂಡಿದ್ದರು. ಆದರೆ ಇದು ಅವರಿಗೆ ಅಂತಹ ಲಾಭವನ್ನೇನೂ ತಂದುಕೊಟ್ಟಿಲ್ಲ.

ತೆಲಂಗಾಣದಲ್ಲಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದಲ್ಲಿ ಟಿಆರ್‌ಎಸ್‌ ಪ್ರಚಂಡ ಗೆಲುವು ಕಂಡಿದೆ. ಇಲ್ಲಿ ಕಳೆದ ಸಲ ಒಂದು ಸ್ಥಾನ ಮಾತ್ರ ಗಳಿಸಿದ್ದ ಬಿಜೆಪಿ ಈ ಬಾರಿ ಇನ್ನೂ ಕೆಲವು ಸ್ಥಾನಗಳಲ್ಲಿ ಗೆಲುವು ಕಂಡಿರುವುದು ಸಾಧನೆಯೇ ಸರಿ.

ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ 20ಕ್ಕೂ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವುದು ಅಚ್ಚರಿಯ ಬೆಳವಣಿಗೆ.

ಕೇಂದ್ರದಲ್ಲಿ ಬಿಜೆಪಿಯೇತರ ಮೈತ್ರಿಕೂಟ ರಚನೆಗಾಗಿ ದೆಹಲಿ, ಲಖನೌ ಮತ್ತು ಪಶ್ಚಿಮಬಂಗಾಳದಲ್ಲಿ ಪ್ರಮುಖ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದ ಟಿಡಿಪಿಯ ಚಂದ್ರಬಾಬು ನಾಯ್ಡು ಮೂಲೆಗುಂಪಾಗಿದ್ದಾರೆ. ನಾಯ್ಡು ಅವರ ಮೋದಿ ವಿರೋಧಿ ನಿಲುವೇ ಜಗನ್‌ ಪರ ಮತಗಳಾಗಿಪರಿವರ್ತನೆಯಾದಂತಿದೆ.

ಜಗನ್‌ ಅವರು ಮೋದಿ ಪರವಾಗಿ ಅಥವಾ ವಿರೋಧಿಯಾಗಿ ಗುರುತಿಸಿಕೊಂಡಿಲ್ಲ ಅಲ್ಲದೆ ಈ ಹಿಂದೆ 360 ದಿನಗಳವರೆಗೆ ಅವರು ರಾಜ್ಯದಾದ್ಯಂತ ‘ಮಹಾ ಸಂಕಲ್ಪ ಪಾದಯಾತ್ರೆ’ ಕೈಗೊಂಡು ಜನರಿಗೆ ಹತ್ತಿರವಾಗಿದ್ದರು.

ಗೋವಾ ರಾಜ್ಯದಲ್ಲಿರುವ ಎರಡು ಸ್ಥಾನಗಳಲ್ಲಿ ಬಿಜೆಪಿಮತ್ತು ಕಾಂಗ್ರೆಸ್‌ತಲಾ ಒಂದೊಂದು ಸ್ಥಾನ ಗಳಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.