ADVERTISEMENT

ಮೋದಿಗೆ ಹಿಟ್ಲರ್ ರೀತಿಯಲ್ಲೇ ಸಾವು ಬರಲಿದೆ: ಕಾಂಗ್ರೆಸ್ ನಾಯಕ ಸಹಾಯ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 11:12 IST
Last Updated 20 ಜೂನ್ 2022, 11:12 IST
ನರೇಂದ್ರ ಮೋದಿ: ಪಿಟಿಐ
ನರೇಂದ್ರ ಮೋದಿ: ಪಿಟಿಐ   

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಡಾಲ್ಫ್ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಅವರು ಇದೇ ರೀತಿ ಜರ್ಮನಿಯ ಸರ್ವಾಧಿಕಾರಿಯ ಹಾದಿಯನ್ನೇ ಹಿಡಿದರೆ ಹಿಟ್ಲರ್ ರೀತಿಯೇ ಸಾವು ಬರಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್ ಕಿಡಿ ಕಾರಿದ್ದಾರೆ.

ಆದರೆ, ಕೇಂದ್ರದ ಅಗ್ನಿಪಥ ಯೋಜನೆ ವಿರೋಧಿಸಿ ಇಲ್ಲಿನ ಜಂತರ್ ಮಂತರ್‌ನಲ್ಲಿ ನಡೆದ ಪಕ್ಷದ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಸಹಾಯ್ ನೀಡಿದ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಪ್ರಧಾನಿ ವಿರುದ್ಧ ಯಾವುದೇ ಅಸಭ್ಯ ಟೀಕೆಗಳನ್ನು ಅನುಮೋದಿಸುವುದಿಲ್ಲ ಎಂದು ಹೇಳಿದೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಹಾಯ್, ಬಿಜೆಪಿ ಆಡಳಿತವನ್ನು ‘ಲೂಟಿಕೋರರ’ಸರ್ಕಾರ ಎಂದು ಕರೆದರು.

ADVERTISEMENT

ಇದು ಲೂಟಿಕೋರರ ಸರ್ಕಾರವಾಗಿದ್ದು, ಮೋದಿ ರಿಂಗ್ ಮಾಸ್ಟರ್‌ ರೀತಿ ವರ್ತಿಸುತ್ತಿದ್ದಾರೆ. ಸರ್ವಾಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದರು.

‘ಮೋದಿ ಹಿಟ್ಲರ್‌ನನ್ನೂ ಮೀರಿಸಿದ್ದಾರೆ ಅನ್ನಿಸುತ್ತಿದೆ. ಹಿಟ್ಲರ್ ಸೇನೆಯೊಳಗೇ ‘ಖಾಕಿ’ಎಂಬ ಸಂಘಟನೆಯನ್ನೂ ಹುಟ್ಟು ಹಾಕಿದ್ದ, ಮೋದಿ ಹಿಟ್ಲರ್‌ನ ಹಾದಿ ಹಿಡಿದರೆ ಹಿಟ್ಲರ್‌ನಂತೆ ಸಾವು ಬರಲಿದೆ, ಇದನ್ನು ನೆನಪಿಟ್ಟುಕೊಳ್ಳಿ’ಎಂದು ಸಹಾಯ್ ಟೀಕಿಸಿದ್ದರು.

ಈ ಹೇಳಿಕೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ, ಕಾಂಗ್ರಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಜೈರಾಂ ರಮೇಶ್, ಮೋದಿ ಸರ್ಕಾರದ ಸರ್ವಾಧಿಕಾರಿ ಮನಸ್ಥಿತಿ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಪಕ್ಷವು ನಿರಂತರ ಹೋರಾಡಲಿದೆ. ಆದರೆ, ಪ್ರಧಾನ ಮಂತ್ರಿ ವಿರುದ್ಧದ ಯಾವುದೇ ಅಸಭ್ಯ ಹೇಳಿಕೆಗಳನ್ನು ಪಕ್ಷ ಅನುಮೋದಿಸುವುದಿಲ್ಲ. ಗಾಂಧಿ ತತ್ವಗಳ ಆಧಾರದ ಮೇಲೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.