ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಸಚಿವ ಪರಬ್‌ ಹಾಜರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 11:07 IST
Last Updated 21 ಜೂನ್ 2022, 11:07 IST
ಅನಿಲ್‌ ಪರಬ್‌
ಅನಿಲ್‌ ಪರಬ್‌   

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಅವರು ಮಂಗಳವಾರ ಇಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕರಾವಳಿಯ ದಾಪೋಲಿ ಬೀಚ್ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣದಲ್ಲಿ ನಿಯಮಾವಳಿ ಉಲ್ಲಂಘನೆ ಮತ್ತು ಹಣಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸಚಿವ ಪರಬ್‌ ಅವರಿಗೆ ಇ.ಡಿ ನೋಟಿಸ್‌ ಜಾರಿ ಮಾಡಿತ್ತು.

ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇ.ಡಿ ಕಚೇರಿಗೆ ಬೆಳಿಗ್ಗೆ 11.20ಕ್ಕೆ ಪರಬ್‌ ಹಾಜರಾದರು. ಜೂನ್ 15ರಂದು ವಿಚಾರಣೆಗೆ ಹಾಜರಾಗಬೇಕಿದ್ದ ಪರಬ್‌ ಅಧಿಕೃತ ಕೆಲಸ ನಿಮಿತ್ತ ಅಂದು ವಿಚಾರಣೆಗೆ ಗೈರಾಗಿದ್ದರು.

ADVERTISEMENT

ಪರಬ್‌ ಮತ್ತು ಇತರರ ವಿರುದ್ಧ ಪಿಎಂಎಲ್‌ಎ ಅಡಿ ಹೊಸ ಪ್ರಕರಣ ದಾಖಲಾದ ನಂತರ,ಪರಬ್‌ ಅಧಿಕೃತ ನಿವಾಸ ಸೇರಿ ದಾಪೋಲಿ, ಪುಣೆಯಲ್ಲಿ ಏಳು ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿತ್ತು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪರಬ್ ಅವರನ್ನು ವಿಚಾರಣೆ ನಡೆಸಲು ಮತ್ತು ಅವರ ಹೇಳಿಕೆಗಳನ್ನು ದಾಖಲಿಸಲು ತನಿಖಾ ಸಂಸ್ಥೆ ಬಯಸಿದೆ ಎಂದು ಇ.ಡಿ ಅಧಿಕಾರಿಗಳು ಈ ಮೊದಲು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.