ADVERTISEMENT

ಮಂಗನ ದಾಳಿಗೆ ಮಹಿಳೆ ಬಲಿ

ಎರಡೇ ದಿನಗಳ ಅಂತರದಲ್ಲಿ ಇಬ್ಬರನ್ನು ಬಲಿಪಡೆದ ವಾನರಗಳು

ಪಿಟಿಐ
Published 15 ನವೆಂಬರ್ 2018, 19:42 IST
Last Updated 15 ನವೆಂಬರ್ 2018, 19:42 IST
ಆಗ್ರಾದ ಮಸೀದಿಯೊಂದರ ಗೋಡೆಯ ಮೇಲೆ ಕುಳಿತಿರುವ ಮಂಗಗಳು  ಎಎಫ್‌ಪಿ ಚಿತ್ರ
ಆಗ್ರಾದ ಮಸೀದಿಯೊಂದರ ಗೋಡೆಯ ಮೇಲೆ ಕುಳಿತಿರುವ ಮಂಗಗಳು  ಎಎಫ್‌ಪಿ ಚಿತ್ರ   

ಆಗ್ರಾ: ಮಂಗನ ದಾಳಿಗೆ ಹಸುಗೂಸು ಬಲಿಯಾದ ಎರಡೇ ದಿನಗಳಲ್ಲಿ ಮಹಿಳೆಯೊಬ್ಬರು ವಾನರ ದಾಳಿಗೆ ತುತ್ತಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.

ಭೂಮಿದೇವಿ (58) ಎಂಬುವರು ಬುಧವಾರ ರಾತ್ರಿ ಇಲ್ಲಿನ ಥೋಕ್‌ ಮೊಹಲ್ಲಾದ ತಮ್ಮ ಮನೆಯ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗವೊಂದು ದಾಳಿ ಮಾಡಿದೆ.

ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಸು ನೀಗಿದ್ದಾರೆ.

ADVERTISEMENT

‘ಹೆಚ್ಚು ರಕ್ತಸ್ರಾವವಾಗಿದ್ದರಿಂದ ವೈದ್ಯರು ಅವರನ್ನು ಉಳಿಸಲಾಗಲಿಲ್ಲ’ ಎಂದು ಭೂಮಿದೇವಿಯವರ ಕುಟುಂಬ ಸದಸ್ಯರು ಹೇಳಿದ್ದಾರೆ.

ಬುಧವಾರ ರಾತ್ರಿಯೇ ಈ ಕುರಿತು ಸಭೆ ಮಾಡಿದ ಸ್ಥಳೀಯರು, ಗುರುವಾರ ಪಾಲಿಕೆ ವಿರುದ್ಧ ಧರಣಿ ನಡೆಸಿದರು. ಅಲ್ಲದೆ, 1972ರ ವನ್ಯಜೀವಿ ಕಾಯ್ದೆಯ ಅಡಿ ಸಂರಕ್ಷಿತ ಪ್ರಾಣಿಗಳ ಪಟ್ಟಿಯಿಂದ ಮಂಗಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಸದ್ಯ, ಆಗ್ರಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 25 ಸಾವಿರ ಮಂಗಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮಂಗಗಳನ್ನು ಅರಣ್ಯಪ್ರದೇಶಕ್ಕೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಒಂದು ದಶಕದಿಂದ ಕೇಳುತ್ತಿದ್ದೇವೆ. ಆದರೆ, ಸರ್ಕಾರದಿಂದ ಈವರೆಗೆ ನಮಗೆ ಅನುಮತಿ ಸಿಗುತ್ತಿಲ್ಲ’ ಎಂದು ಸತ್ಯಮೇವ್ ಜಯತೆ ಸರ್ಕಾರೇತರ ಸಂಸ್ಥೆ ಟ್ರಸ್ಟಿ ಮುಖೇಶ್‌ ಜೈನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.