ADVERTISEMENT

ಕೇರಳ, ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಹವಾಮಾನ ಇಲಾಖೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 16:30 IST
Last Updated 16 ಜುಲೈ 2019, 16:30 IST
   

ತಿರುವನಂತಪುರ: ಮುಂಗಾರು ಕೊರತೆ ಎದುರಿಸುತ್ತಿರುವ ಕೇರಳದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೇರಳದ ಆರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಕರ್ನಾಟಕ ಕರಾವಳಿ ಮತ್ತು ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಜುಲೈ 9ರವರೆಗೆ ಕೇರಳದಲ್ಲಿ ವಾಡಿಕೆಗಿಂತ ಶೇ 45ರಷ್ಟು ಕಡಿಮೆ ಮುಂಗಾರು ಮಳೆಯಾಗಿದೆ. ಇದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ.

ಇನ್ನು ಎರಡು ವಾರವಷ್ಟೇ ವಿದ್ಯುತ್ ಉತ್ಪಾದಿಸುವಷ್ಟು ನೀರು ಕೇರಳದ ಜಲಾಶಯಗಳಲ್ಲಿದೆ. ಹೀಗಾಗಿ ಲೋಡ್‌ ಶೆಡ್ಡಿಂಗ್ ಜಾರಿಗೆ ತರಲು ಮತ್ತು ನೀರು ಪೂರೈಕೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರವು ಸೋಮವಾರ ಸಭೆ ನಡೆಸಿತ್ತು. ಆದರೆ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿರುವುದರಿಂದ ಈ ನಿರ್ಧಾರವನ್ನು ಇನ್ನೂ ಎರಡು ವಾರ ತಡೆಹಿಡಿಯಲು ಸರ್ಕಾರ ನಿರ್ಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.