ADVERTISEMENT

ಬಿಹಾರ: ಪ್ರಸಾದ ಸೇವಿಸಿ 120 ಮಂದಿ ಅಸ್ವಸ್ಥ

ಐಎಎನ್ಎಸ್
Published 13 ಜೂನ್ 2022, 11:08 IST
Last Updated 13 ಜೂನ್ 2022, 11:08 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಪಟ್ನಾ: ಪ್ರಸಾದ ಸೇವಿಸಿ ಸುಮಾರು 120 ಮಂದಿ ಅಸ್ವಸ್ಥರಾದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.ತೀವ್ರವಾಗಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈಶಾಲಿ ಜಿಲ್ಲೆಯ ಪತೇಪುರ್ ಬ್ಲಾಕ್‌ನ ಮಹತಿ ಧರ್ಮಚಂದ್ ಪಂಚಾಯತ್‌ನ 10ನೇ ವಾರ್ಡ್‌ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಪೂಜೆಯ ಪ್ರಸಾದ ಸೇವಿಸಿದವರ ಪೈಕಿ ಅನೇಕರಲ್ಲಿ ಹೊಟ್ಟೆ ನೋವು, ವಾಂತಿ, ಭೇದಿ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.

‘ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ 10ನೇ ವಾರ್ಡ್‌ಗೆ ವೈದ್ಯಕೀಯ ತಂಡವನ್ನು ಕಳುಹಿಸಿಕೊಟ್ಟಿದ್ದೇವೆ. ಅಲ್ಲಿ ಜನರು ಕಲುಷಿತ ಆಹಾರ ಸೇವಿಸಿರುವುದು ಗೊತ್ತಾಗಿದೆ. ಒಆರ್‌ಎಸ್ ಪೊಟ್ಟಣಗಳನ್ನು ವಿತರಿಸಲಾಗಿದ್ದು, ಇತರ ತುರ್ತು ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅಸ್ವಸ್ಥರಾದವರ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪತೇಪುರ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ’ ಎಂದು ವೈಶಾಲಿ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಅಮಿತಾಭ್ ಕುಮಾರ್ ಸಿನ್ಹ ತಿಳಿಸಿದ್ದಾರೆ.

‘ಪ್ರಸಾದ ತಯಾರಿಕೆಗೆ ಬಳಸಿದ ಬಾಳೆ ಹಣ್ಣುಗಳಲ್ಲಿ ಅವುಗಳನ್ನು ಹಣ್ಣಾಗಿಸಲು ಬಳಸಿದ ರಾಸಾಯನಿಕದ ಅಂಶ ಮಿತಿಗಿಂತಲೂ ಹೆಚ್ಚಾಗಿತ್ತು. ರಾಸಾಯನಿಕ ಅತಿಯಾಗಿ ಬಳಸಿದ ಬಾಳೆ ಹಣ್ಣುಗಳನ್ನು ಚೆನ್ನಾಗಿ ಬೇಯಿಸಿ ಪ್ರಸಾದ ತಯಾರಿಸಿದ್ದರಿಂದ ಅದು ಮತ್ತಷ್ಟು ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ಹೆಚ್ಚಿನ ಸಮಸ್ಯೆಗೆ ಕಾರಣವಾಗಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.