ADVERTISEMENT

ಪ್ರಯೋಗ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಲಸಿಕೆ ಅಭಿಯಾನ ಆರಂಭಿಸಿದ ರಷ್ಯಾ

ರಾಯಿಟರ್ಸ್
Published 5 ಡಿಸೆಂಬರ್ 2020, 11:39 IST
Last Updated 5 ಡಿಸೆಂಬರ್ 2020, 11:39 IST
ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆ
ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆ   

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸ್ಪುಟ್ನಿಕ್–ವಿ ಲಸಿಕೆಯ ಸಾಮೂಹಿಕ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಶನಿವಾರದಿಂದ ನಗರದ 70 ಕ್ಲಿನಿಕ್‌ಗಳಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಆರಂಭಿಸಿದ್ದು, ಇದು ರಷ್ಯಾದ ಮೊದಲ ಸಾಮೂಹಿಕ ಲಸಿಕೆ ಅಭಿಯಾನ ಎಂದು ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ತಿಳಿಸಿದೆ.

ಶೀಘ್ರವಾಗಿ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಮೊಟ್ಟ ಮೊದಲು ಲಸಿಕೆ ಹಾಕಲಾಗುತ್ತದೆ ಎಂದು ಟಾಸ್ಕ್ ಫೋರ್ಸ್ ತಿಳಿಸಿದೆ..

"ನೀವು ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಯಾವುದೇ ಖರ್ಚಿಲ್ಲದೆ ಕೋವಿಡ್ 19 ಲಸಿಕೆ ಪಡೆಯುವ ಉನ್ನತ ಆದ್ಯತೆ ಹೊಂದಿದ್ದೀರಿ," ಎಂಬ ಸಂದೇಶವು ಮಾಸ್ಕೋ ನಗರದ ಎಲಿಮೆಂಟರಿ ಶಾಲೆಯ ಶಿಕ್ಷಕನಿಗೆ ಬಂದಿದೆ.

ADVERTISEMENT

ಮಾಸ್ಕೋ ನಗರವು ಕೊರೋನಾ ವೈರಸ್ ಸೋಂಕು ವ್ಯಾಪಕ ಹರಡುವಿಕೆಯ ಕೇಂದ್ರ ಸ್ಥಾನವಾಗಿದ್ದು, ರಾತ್ರೋರಾತ್ರಿ 7,993 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದಿನ ದಿನ 6,868 ರಷ್ಟಿದ್ದ ಹೊಸ ಪ್ರಕರಣಗಳು ದಿಢೀರ್ ಏರಿಕೆಯಾಗಿವೆ. ಸೆಪ್ಟೆಂಬರ್ ಆರಂಭದಲ್ಲಿ ನಿತ್ಯ ಸರಾಸರಿ 700 ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವು.

ಲಸಿಕಾ ಅಭಿಯಾನ ಆರಂಭವಾದ ಮೊದಲ 5 ಗಂಟೆಗಳಲ್ಲಿ ಶಿಕ್ಷಕರು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಸೇರಿ 5000 ಸಾವಿರ ಮಂದಿ ಲಸಿಕೆ ಪಡೆಯಲು ಸಹಿ ಹಾಕಿದ್ದಾರೆ ಎಂದು ಮೇಯರ್ ಸರ್ಜೀ ಸೊಬ್ಯಾನಿನ್ ತಿಳಿಸಿದ್ದಾರೆ.

ಲಸಿಕೆ ಪಡೆಯುವ ಸಾರ್ವಜನಿಕರ ವಯಸ್ಸಿನ ಮಿತಿಯನ್ನ 60ಕ್ಕೆ ನಿಗದಿಪಡಿಸಲಾಗಿದೆ. ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರು, ಗರ್ಭಿಣಿಯರು, ಕಳೆದ ಎರಡು ವಾರಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವುದನ್ನ ನಿರ್ಬಂಧಿಸಲಾಗಿದೆ.

ಮಾರಣಾಂತಿಕ ಕೊರೊನಾ ವೈರಸ್‌ಗೆ ರಷ್ಯಾವು ಎರಡು ಲಸಿಕೆಗಳನ್ನ ಅಭಿವೃದ್ಧಿಪಡಿಸಿದ್ದು, ಸ್ಪುಟ್ನಿಕ್–ವಿ ಲಸಿಕೆಯನ್ನ ರಷ್ಯಾದ ನೇರ ಬಂಡವಾಳ ನಿಧಿ ಅಭಿವೃದ್ಧಿಪಡಿಸಿದ್ದರೆ, ಮತ್ತೊಂದನ್ನ ಸೈಬಿರಿಯಾದ ವೆಕ್ಟರ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಎರಡೂ ಲಸಿಕೆಗಳು ಇನ್ನಷ್ಟೇ ಅಂತಿಮ ಹಂತದ ಪ್ರಯೋಗವನ್ನ ಪೂರ್ಣಗೊಳಿಸಬೇಕಿದೆ.


ಲಸಿಕೆಯ ಸುರಕ್ಷತೆ ಮತ್ತು ಪರಿಣಾಮದ ಕುರಿತಾದ ಪ್ರಯೋಗ ಪೂರ್ಣಗೊಳ್ಳುವ ಮೊದಲೇ ಸಾಮೂಹಿಕ ಲಸಿಕಾ ಅಭಿಯಾನ ಆರಂಭಿಸಿರುವ ರಷ್ಯಾದ ತರಾತುರಿ ನಿರ್ಣಯದ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಸ್ಪುಟ್ನಿಕ್ – ವಿ ಲಸಿಕೆಯನ್ನುಎರಡು ಬಾರಿ ಚುಚ್ಚುಮದ್ದು ಹಾಕುವ ಮೂಲಕ ನೀಡಲಾಗುತ್ತಿದ್ದು, ಎರಡನೇ ಡೋಸ್ ಅನ್ನ 21 ದಿನಗಳ ಬಳಿಕ ನೀಡುವ ನಿರೀಕ್ಷೆ ಇದೆ.

ಜೂನ್ ತಿಂಗಳಿಂದ ಲಾಕ್ ಡೌನ್ ಡೌನ್ ನಿಯಮಾವಳಿ ಸಡಿಲಗೊಳಿಸಿದ್ದ ಮಾಸ್ಕೋದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡೆಲಿವರಿ ಹೊರತುಪಡಿಸಿ ಪಾರ್ಕ್‌ಗಳು, ಕೆಫೆ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳನ್ನ ಬಂದ್ ಮಾಡಲಾಗಿದ್ದು, ನಿಯಮ ಉಲ್ಲಂಘನೆ ತಡೆಯಲು ಪೊಲೀಸ್ ಪಹರೆ ಸಹ ಹಾಕಲಾಗಿದೆ.

ಶನಿವಾರ ರಷ್ಯಾ ದೇಶದಲ್ಲಿ 28,782 ಹೊಸ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಇದುವರೆಗೆ ಪತ್ತೆಯಾದ ದಿನದ ಅತ್ಯಧಿಕ ಸಂಖ್ಯೆಯಾಗಿದೆ. ಹೀಗಾಗಿ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,431,731 ಕ್ಕೆ ಏರಿಕೆಯಾಗಿದ್ದು, ವಿಶ್ವದಲ್ಲಿ 4ನೇ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.