ADVERTISEMENT

31ನೇ ಬಾರಿ ಎವರೆಸ್ಟ್ ಏರಿ ತನ್ನದೇ ದಾಖಲೆ ಮುರಿದ ಶೇರ್ಪಾ

ಪಿಟಿಐ
Published 27 ಮೇ 2025, 14:05 IST
Last Updated 27 ಮೇ 2025, 14:05 IST
ಕಾಮಿ ರೀಟಾ ಶೇರ್ಪಾ–ಎಎಫ್‌ಪಿ ಚಿತ್ರ
ಕಾಮಿ ರೀಟಾ ಶೇರ್ಪಾ–ಎಎಫ್‌ಪಿ ಚಿತ್ರ   

ಕಠ್ಮಂಡು: ನೇಪಾಳದ ಶೇರ್ಪಾ ಕಾಮಿ ರೀಟಾ ಅವರು ಮಂಗಳವಾರ 31ನೇ ಬಾರಿ ಮೌಂಟ್‌ ಎವರೆಸ್ಟ್ ಏರುವ ಮೂಲಕ ತಮ್ಮದೇ ದಾಖಲೆ ಮುರಿದರು.

ಈ ಮೂಲಕ ವಿಶ್ವದ ಅತೀ ಎತ್ತರದ ಶಿಖರಕ್ಕೆ ಅತೀ ಹೆಚ್ಚು ಬಾರಿ ಆರೋಹಣ ಮಾಡಿದ ಕೀರ್ತಿಗೂ ಭಾಜನರಾದರು.

55 ವರ್ಷದ ಪರ್ವಾತರೋಹಿ ರೀಟಾ ಅವರು 8,849 ಅಡಿ ಎತ್ತರದ ಶಿಖರವನ್ನು ಬೆಳಿಗ್ಗೆ 4 ಗಂಟೆಗೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಏರಿದರು ಎಂದು ಪರ್ವಾತರೋಹಣ ಸಂಘಟಿಸುವ ‘ಸೆವೆನ್‌ ಸಮ್ಮಿಟ್‌ ಟ್ರಕ್ಸ್‌’ನ ಮುಖ್ಯಸ್ಥ ಮಿಂಗ್ಮಾ ಶೇರ್ಪಾ ತಿಳಿಸಿದರು.

ADVERTISEMENT

ಲೆಫ್ಟಿನೆಂಟ್‌ ಕರ್ನಲ್‌ ಮನೋಜ್‌ ಜೋಶಿ ನೇತೃತ್ವದ ಭಾರತೀಯ ಸೇನಾ ಸಾಹಸಯಾನಿಗಳ ಘಟಕವು ಏವರೆಸ್ಟ್ ಆರೋಹಣ ಮಾಡಿದ ವೇಳೆ ಕಾಮಿ ರೀಟಾ ಅವರೇ ಮಾರ್ಗದರ್ಶನ ಮಾಡಿದ್ದರು. 

‘ವಿಶ್ವದ ಅತೀ ಎತ್ತರದ ಶಿಖರಕ್ಕೆ ಅತೀ ಹೆಚ್ಚು ಬಾರಿ ಏರಿದ ದಾಖಲೆ ಬರೆದಿದ್ದು, ಯಾರೂ ಕೂಡ ಅವರ ಸಾಧನೆಯ ಹತ್ತಿರಕ್ಕೂ ಸುಳಿಯಲು ಸಾಧ್ಯವಿಲ್ಲ’ ಎಂದು ಮಿಂಗ್ಮಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ‘ಕಾಠ್ಮಂಡು ಪೋಸ್ಟ್’ ವರದಿ ಮಾಡಿದೆ.

‘ಕಾಮಿ ರೀಟಾ ಅವರು ಸುರಕ್ಷಿತ ಹಾಗೂ ಸ್ಥಿರವಾಗಿದ್ದಾರೆ. ಆವರೋಹಣ ಮಾಡಿಕೊಂಡು, ಬೇಸ್‌ಕ್ಯಾಂಪ್‌ಗೆ ಮರಳಿದರು. ಅಪರೂಪದ ಕೌಶಲ ಹೊಂದಿದ್ದು, ಶಿಖರ ಏರುವ ವಿಚಾರದಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಅವರ ಸಾಧನೆ ಕುರಿತು ಅಪಾರ ಹೆಮ್ಮೆ ತಂದಿದೆ’ ಎಂದು ವಿವರಿಸಿದರು.

1992ರಿಂದ ಮೌಂಟ್‌ ಏವರೆಸ್ಟ್‌ ಏರುವ ತಂಡದ ಸಹಾಯಕ ಸದಸ್ಯರಾಗಿ ಆರೋಹಣ ಆರಂಭಿಸಿದ್ದರು. 1994ರಿಂದ 2025ರಲ್ಲಿ ಕೆ–2, ಮೌಂಟ್‌ ಲೊಟ್ಸೆ ಒಂದು ಸಲ, ಮನಸ್ಲು ಮೂರು ಬಾರಿ ಹಾಗೂ ಛೋ–ಒಯು ಶಿಖರವನ್ನು 8 ಬಾರಿ ಆರೋಹಣ ಮಾಡಿದ್ದರು. 

ನೇಪಾಳ ಭಾಗದಿಂದ ನೂರಾರು ಮಂದಿ ಮೌಂಟ್‌ ಏವರೆಸ್ಟ್‌ ಏರಲು ಪ್ರಯತ್ನಿಸುತ್ತಾರೆ. 1953ರಲ್ಲಿ ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲರಿ ಹಾಗೂ ನೇಪಾಳಿ ಶೇರ್ಪಾ ತೆಗ್ಜಿಂಗ್‌ ನಾರ್ಗೆ ಮೊದಲ ಬಾರಿಗೆ ಮೌಂಟ್‌ ಏವರೆಸ್ಟ್‌ ಏರಿ ದಾಖಲೆ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.