ADVERTISEMENT

‘ಹಿಂದಿ ಹೇರಿಕೆ ನೀತಿ ವಾಪಸ್‌ ಪಡೆಯಿರಿ’

ಅಮಿತ್ ಶಾಗೆ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 18:27 IST
Last Updated 13 ಏಪ್ರಿಲ್ 2022, 18:27 IST

ಕೊಹಿಮಾ (ಪಿಟಿಐ): ‘ಈಶಾನ್ಯ ಭಾರತದ ರಾಜ್ಯಗಳಲ್ಲಿ 10ನೇ ತರಗತಿವರೆಗೆ ಹಿಂದಿಯನ್ನು ಕಡ್ಡಾಯ ಮಾಡುವ ನಿರ್ಧಾರವು ಪ್ರಾದೇಶಿಕ ಭಾಷೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಮತ್ತು ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ’ ಎಂದು ಈಶಾನ್ಯ ವಿದ್ಯಾರ್ಥಿಗಳ ಸಂಘಟನೆಯು (ಎನ್‌ಇಎಸ್‌ಒ) ಹೇಳಿದೆ.

ಈಚೆಗೆ ಅಧಿಕೃತ ಭಾಷಾ ಸಂಸದೀಯ ಸಮಿತಿಯ 37ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಮತ್ತು ಸಮಿತಿಯ ಅಧ್ಯಕ್ಷ ಅಮಿತ್ ಶಾ, ‘10ನೇ ತರಗತಿವರೆಗೆ ಹಿಂದಿಯನ್ನು ಕಡ್ಡಾಯ ವಿಷಯವಾಗಿ ಬೋಧಿಸಲು ಈಶಾನ್ಯ ಭಾರತದ ಎಲ್ಲ ರಾಜ್ಯಗಳೂ ಒಪ್ಪಿಗೆ ಸೂಚಿಸಿವೆ’ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಎನ್‌ಇಎಸ್‌ಒ ಹೀಗೆ ಹೇಳಿದೆ. ಎಂಟು ವಿದ್ಯಾರ್ಥಿಗಳ ಸಂಘಟನೆಗಳ ಒಕ್ಕೂಟವಾದ ಎನ್‌ಇಎಸ್‌ಒ ಈ ಸಂಬಂಧ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ.

‘ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು 10ನೇ ತರಗತಿವರೆಗೆ ಕಡ್ಡಾಯವಾಗಿ ಬೋಧಿಸಬೇಕು. ಹಿಂದಿ
ಯನ್ನು ಒಂದು ಐಚ್ಛಿಕ ವಿಷಯವಾಗಿ ಮಾತ್ರ ಉಳಿಸಿಕೊಳ್ಳಬೇಕು. ಪ್ರಾದೇಶಿಕ ಭಾಷೆಗಳಿಗೆ ಮಾರಕವಾದ ಈ ನೀತಿಯನ್ನು ತಕ್ಷಣವೇ ವಾಪಸ್‌ ಪಡೆಯಬೇಕು’ ಎಂದು ಎನ್‌ಇಎಸ್‌ಒ ತನ್ನ ಪತ್ರದಲ್ಲಿ ಆಗ್ರಹಿಸಿದೆ.

ADVERTISEMENT

‘ಭಾರತದಲ್ಲಿ ಪ್ರಾದೇಶಿಕ ಭಾಷೆಗಳೂ ಹೇರಳವಾಗಿವೆ ಎಂಬುದೂ ಎಲ್ಲರಿಗೂ ಗೊತ್ತಿದೆ. ಆ ಎಲ್ಲಾ ಭಾಷೆಗಳು ತಮ್ಮದೇ ನೆಲೆಯಲ್ಲಿ ವಿಶಿಷ್ಟವೂ, ಶ್ರೀಮಂತವೂ ಆಗಿವೆ. 10ನೇ ತರಗತಿವರೆಗೆ ಕಡ್ಡಾಯ ಮಾಡುವ ಮೂಲಕ ಹಿಂದಿಯನ್ನು ಹೇರಿಕೆ ಮಾಡುವುದು, ಈ ಭಾಷೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ’ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ‘ಹಿಂದಿಯ ಬಳಕೆಯನ್ನು ಹೇರು
ವುದರಿಂದ ದೇಶದಲ್ಲಿ ಒಗ್ಗಟ್ಟು ಮೂಡಿ
ಸಲು ಸಾಧ್ಯವಿಲ್ಲ. ಬದಲಿಗೆ ಅದು ಕಳವಳದ ಸಾಧನವಾಗಲಿದೆ. ಈ ರೀತಿಯ ಹೇರಿಕೆಯನ್ನು ಎನ್‌ಇಎಸ್‌ಒ ವಿರೋಧಿಸಲಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.