ADVERTISEMENT

ಇಂದೋರ್‌ನಲ್ಲಿ ಲತಾ ಹಾಡುಗಳ ಮ್ಯೂಸಿಯಂ, ಸಂಗೀತ ಅಕಾಡೆಮಿ ಸ್ಥಾಪನೆ: ಸಿಎಂ ಚೌಹಾಣ್‌

ಪಿಟಿಐ
Published 7 ಫೆಬ್ರುವರಿ 2022, 11:41 IST
Last Updated 7 ಫೆಬ್ರುವರಿ 2022, 11:41 IST
ಲತಾ ಮಂಗೇಶ್ಕರ್‌ 
ಲತಾ ಮಂಗೇಶ್ಕರ್‌    

ಭೋಪಾಲ್‌: ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್‌ ಅವರ ಸ್ಮರಣಾರ್ಥ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸೋಮವಾರ ಇಲ್ಲಿ ಒಂದು ಸಸಿ ನೆಟ್ಟರು. ಅಲ್ಲದೆ ಗಾಯಕಿಯ ಜನ್ಮಸ್ಥಳವಾದ ಇಂದೋರ್‌ನಲ್ಲಿ ಸಂಗೀತ ಅಕಾಡೆಮಿ ಮತ್ತು ಅವರ ಎಲ್ಲಾ ಹಾಡುಗಳ ಮಾಹಿತಿ ನೀಡುವ ಒಂದು ಮ್ಯೂಸಿಯಂ ಸ್ಥಾಪಿಸುವುದಾಗಿ ಇದೇ ವೇಳೆ ಘೋಷಿಸಿದರು.

ಇಂದೋರ್‌ನಲ್ಲಿ ಗಾಯಕಿಯ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಇಲ್ಲಿಯೇ ಅವರ ಹೆಸರಲ್ಲಿ ಕಾಲೇಜೊಂದನ್ನು ತೆರೆಯಲಾಗುವುದು. ಜೊತೆಗೆ ಅವರ ಜನ್ಮದಿನದಂದು ಅವರ ಹೆಸರಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರಶಸ್ತಿ ನೀಡಲಾಗುವುದು ಎಂದೂ ಅವರು ಹೇಳಿದರು.

‘ಲತಾ ಮಂಗೇಶ್ಕರ್‌ ಅವರ ಕರ್ಮಭೂಮಿ ಮಧ್ಯಪ್ರದೇಶ ಆಗದಿದ್ದರೂ ಅವರು ಇಲ್ಲಿಯ ಮಗಳಾಗಿದ್ದಾರೆ’ ಎಂದು ಚೌಹಾಣ್‌ ಹೇಳಿದರು.

ADVERTISEMENT

‘ದೀದಿ ಜೊತೆಗಿನ ಅಪೂರ್ವ ಬಾಲ್ಯ’: ಸಹೋದರಿ ಲತಾ ಅವರನ್ನು ಸ್ಮರಿಸಿದ ಆಶಾ ಭೋಂಸ್ಲೆ

ಮುಂಬೈ: ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು ಭಾನುವಾರ ತಮ್ಮ ಅಕ್ಕ ಮತ್ತು ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್‌ ಅವರನ್ನು ಸ್ಮರಿಸಿಕೊಂಡಿದ್ದಾರೆ.

ಲತಾ ಅವರೊಂದಿಗಿನ ಬಾಲ್ಯದ ಚಿತ್ರವೊಂದನ್ನು ಹಂಚಿಕೊಂಡಿರುವ ಭೋಂಸ್ಲೆ ಅವರು ಹಲವು ವರ್ಷಗಳು ಒಟ್ಟಿಗೆ ಕಳೆದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಭಾನುವಾರ ಸಂಜೆ ಲತಾ ಮಂಗೇಶ್ಕರ್‌ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ಕೆಲವು ಗಂಟೆಗಳ ನಂತರ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಲತಾ ಅವರೊಂದಿಗಿನ ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ಭೋಂಸ್ಲೆ ಅವರು ಭಾವನಾತ್ಮಕ ಪೋಸ್ಟ್‌ವೊಂದನ್ನು ಮಾಡಿದ್ದಾರೆ.

ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಜಡೆಗೆ ಹೂವು ಮುಡಿದಿರುವ ಸಣ್ಣ ಹುಡುಗಿ ಲತಾ ಮಂಗೇಶ್ಕರ್‌, ಆಶಾ ಅವರೊಡನೆ ಕುಳಿತಿರುವುದನ್ನು ಕಾಣಬಹುದು.

‘ದೀದಿ ಮತ್ತು ನನ್ನ ಬಾಲ್ಯ ಎಂತಹ ಅದ್ಭುತ ಕ್ಷಣಗಳಾಗಿದ್ದವು’ ಎಂದು ಭೋಸ್ಲೆ ಬರೆದುಕೊಂಡಿದ್ದಾರೆ.ಲತಾ ಮಂಗೇಶ್ಕರ್‌ ಅವರು ಆಶಾ ಭೋಂಸ್ಲೆ ಅವರೊಂದಿಗೆ ಸುಮಾರು 50 ಯುಗಳ ಗೀತೆಗಳಿಗೆ ಜೊತೆಯಾಗಿದ್ದಾರೆ.

ಲತಾ ಮಂಗೇಶ್ಕರ್‌ ಅವರ ಚಿತಾಭಸ್ಮ ಸಂಗ್ರಹಿಸಿದ ಸೋದರಳಿಯ ಆದಿನಾಥ್

ಮುಂಬೈ : ಲತಾ ಮಂಗೇಶ್ಕರ್‌ ಅವರ ಸೋದರಳಿಯ ಆದಿನಾಥ್‌ ಅವರುಮುಂಬೈನ ಶಿವಾಜಿ ಪಾರ್ಕ್‌ನಿಂದ ಸೋಮವಾರ ಗಾಯಕಿಯ ಚಿತಾಭಸ್ಮ ಸಂಗ್ರಹಿಸಿದರು.

ಇಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

‘ಲತಾ ಮಂಗೇಶ್ಕರ್‌ ಅವರ ಸಹೋದರ ಮತ್ತು ಸಂಗೀತ ನಿರ್ದೇಶಕ ಹೃದಯನಾಥ್ ಮಂಗೇಶ್ಕರ್‌ ಅವರ ಮಗ ಆದಿನಾಥ್‌ ಅವರಿಗೆ ನಾವು ಗಾಯಕಿಯ ಚಿತಾಭಸ್ಮವನ್ನು ಹಸ್ತಾಂತರಿಸಿದ್ದೇವೆ’ ಎಂದು ಸಹಾಯಕ ಪೌರಾಯುಕ್ತ ಕಿರಣ್‌ ದಿಘಾವ್ಕರ್‌ ಪಿಟಿಐಗೆ ತಿಳಿಸಿದರು.

ಗಾಯಕಿಯ ಅಸ್ಥಿಯನ್ನು ಎಲ್ಲಿ ವಿಸರ್ಜಿಸಲಾಗುವುದು ಎಂದು ಅವರ ಕುಟುಂಬ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.