ADVERTISEMENT

ಮಧ್ಯಪ್ರದೇಶ: ಸರ್ಕಾರ ಉಳಿಸಿಕೊಳ್ಳಲು ‘ಒತ್ತಡ, ಆಮಿಷ’ ತಂತ್ರ

ಮುಖ್ಯಮಂತ್ರಿ ಕಮಲ್‌ನಾಥ್‌ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪ

ಪಿಟಿಐ
Published 18 ಮಾರ್ಚ್ 2020, 1:38 IST
Last Updated 18 ಮಾರ್ಚ್ 2020, 1:38 IST
ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್ ಅವರನ್ನು ಭೇಟಿಯಾದ ನಂತರ ಬಿಜೆಪಿ ನಾಯಕ ಶಿವರಾಜ್‌ ಸಿಂಗ್ ಚೌಹಾಣ್ ಮಾಧ್ಯಮ ಪ್ರತಿನಿಧಿಗಳತ್ತ ಕೈಬೀಸಿದರು.
ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್ ಅವರನ್ನು ಭೇಟಿಯಾದ ನಂತರ ಬಿಜೆಪಿ ನಾಯಕ ಶಿವರಾಜ್‌ ಸಿಂಗ್ ಚೌಹಾಣ್ ಮಾಧ್ಯಮ ಪ್ರತಿನಿಧಿಗಳತ್ತ ಕೈಬೀಸಿದರು.   

ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಸರ್ಕಾರ ಬೀಳದಂತೆ ರಕ್ಷಿಸಲು ‘ಒತ್ತಡ ಮತ್ತು ಆಮಿಷ’ ಒಡ್ಡುವ ತಂತ್ರಗಳನ್ನು ಬಳಸುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಶಿವರಾಜ್‌ ಸಿಂಗ್‌ ಚೌಹಾಣ್‌ ಮಂಗಳವಾರ ಆರೋಪಿಸಿದ್ದಾರೆ.

ತಕ್ಷಣವೇ ವಿಶ್ವಾಸಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಅರ್ಜಿ ಕುರಿತು ಬುಧವಾರದೊಳಗೆ ಪ್ರಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಚೌಹಾಣ್‌ ಅವರ ಈ ಹೇಳಿಕೆ ಹೊರಬಿದ್ದಿದೆ.

ಕಮಲ್‌ನಾಥ್‌ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದರೆ, ಬಹುಮತಕ್ಕೆ ಅಗತ್ಯವಿರುವ ಸದಸ್ಯರ ಸಂಖ್ಯೆಯನ್ನು ಬಿಜೆಪಿ ಹೊಂದಿದೆ ಎಂದು ಚೌಹಾಣ್‌ ಪುನರುಚ್ಚರಿಸಿದ್ದಾರೆ.

ADVERTISEMENT

‘ಕಮಲ್‌ನಾಥ್‌ ಸರ್ಕಾರ ಆದಷ್ಟು ಬೇಗನೆ ವಿಶ್ವಾಸಮತ ಸಾಬೀತುಪಡಿಸಬೇಕು. ಒತ್ತಡ ಮತ್ತು ಆಮಿಷಗಳ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವ ನಿಟ್ಟಿನಲ್ಲಿ ಸಮಯವನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಪಾಲ ಲಾಲ್‌ಜಿ ಟಂಡನ್‌ ಅವರ ಎದುರು ಬಿಜೆಪಿ ತನ್ನ ಶಾಸಕರ ಪರೇಡ್‌ ಅನ್ನು ಸೋಮವಾರ ನಡೆಸಿದೆ ಎಂದು ಚೌಹಾಣ್‌ ಹೇಳಿದರು.

ಮಧ್ಯಪ್ರವೇಶಿಸಲು ‘ಸುಪ್ರೀಂ’ಗೆ ಮನವಿ
ಬೆಂಗಳೂರಿನಲ್ಲಿ ಹಿಡಿದಿಟ್ಟುಕೊಂಡಿರುವ ಬಂಡಾಯ ಶಾಸಕರನ್ನು ಮುಕ್ತಗೊಳಿಸಲು ಮಧ್ಯಪ್ರವೇಶಿಸಿ ಸಹಾಯ ಮಾಡಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಶಾಸಕಾಂಗ ಪಕ್ಷವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದೆ. ಈ ಶಾಸಕ ಅನುಪಸ್ಥಿತಿಯಲ್ಲಿ ವಿಶ್ವಾಸ ಮತ ಕೋರುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕಾಂಗ್ರೆಸ್‌ ಪಕ್ಷದ 16 ಶಾಸಕರನ್ನು ಬಿಜೆಪಿ ಅಪಹರಿಸಿ, ಹಿಡಿದಿಟ್ಟುಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

‘ಸಂಮೋಹನಕ್ಕೊಳಗಾದ ಬಂಡಾಯ ಶಾಸಕರು’
ಭೋಪಾಲ್‌
: ಮಧ್ಯಪ್ರದೇಶದ ಆಡಳಿತ ಪಕ್ಷದ ಬಂಡಾಯ ಶಾಸಕರನ್ನು ಬಿಜೆಪಿ ಬೆಂಗಳೂರಿನಲ್ಲಿ ಹಿಡಿದಿಟ್ಟುಕೊಂಡಿದ್ದು, ಲಿಖಿತವಾಗಿ ಬರೆದುಕೊಟ್ಟಿದ್ದನ್ನಷ್ಟೇ ಓದುವಂತೆ ಅವರನ್ನು ಸಂಮೋಹನಕ್ಕೊಳಪಡಿಸಲಾಗಿದೆ ಎಂದು ಸಾರ್ವಜನಿಕ ಸಂಪರ್ಕಗಳ ಇಲಾಖೆ ಸಚಿವ ಪಿ.ಸಿ.ಶರ್ಮಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ 22 ಮಂದಿ ಬಂಡಾಯ ಶಾಸಕರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಶರ್ಮಾ, ‘ಈ ಎಲ್ಲ ಶಾಸಕರು ಒತ್ತಡಕ್ಕೊಳಗಾಗಿದ್ದಾರೆ. ಭೋಪಾಲ್‌ಗೆ ಬಂದು ಪತ್ರಿಕಾಗೋಷ್ಠಿ ನಡೆಸಲು ಅವರಿಗೇನು ತೊಂದರೆ?. ಅವರನ್ನು ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಸಂಮೋಹನಕ್ಕೊಳಪಡಿಸಿ, ಹಿಡಿದಿಟ್ಟುಕೊಳ್ಳಲಾಗಿದೆ. ಅವರು ಹಿಂದಿರುಗಿದ ನಂತರ, ಸಂಮೋಹನ ಸ್ಥಿತಿಯಿಂದ ಹೊರಬರಲಿದ್ದಾರೆ’ ಎಂದು ಹೇಳಿದ್ದಾರೆ.

‘ಈ ಬಂಡಾಯ ಶಾಸಕರು ಲಿಖಿತವಾಗಿ ಬರೆದುಕೊಟ್ಟಿರುವುದನ್ನಷ್ಟೇ ಓದುತ್ತಿದ್ದಾರೆ’ ಎಂದು ಹೇಳಿರುವ ಅವರು, ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರ ಈ ಬಿಕ್ಕಟ್ಟಿನಿಂದ ಪಾರಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.