ADVERTISEMENT

ಸಾವು–ನೋವಿನ ದತ್ತಾಂಶ ಪರಿಷ್ಕರಣೆಗೆ ಎನ್‌ಜಿಒ ಆಗ್ರಹ

ಭೋಪಾಲ್‌ ಅನಿಲ ದುರಂತ ಪ್ರಕರಣ

ಪಿಟಿಐ
Published 14 ಮಾರ್ಚ್ 2019, 14:33 IST
Last Updated 14 ಮಾರ್ಚ್ 2019, 14:33 IST

ಭೋಪಾಲ್‌: ಭೋಪಾಲ್‌ ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರು ಮತ್ತು ಗಾಯಗೊಂಡ ಸಂತ್ರಸ್ತರ ಅಂಕಿಅಂಶಗಳನ್ನು ಪರಿಷ್ಕರಿಸಬೇಕು ಎಂದು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಗುರುವಾರ ಮಧ್ಯಪ್ರದೇಶ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಭೋಪಾಲ್‌ ಅನಿಲ ದುರಂತದಲ್ಲಿ ತೊಂದರೆಗೆ ಒಳಗಾಗಿ ಬದುಕುಳಿದವರು ಈಗಲು ಹಲವು ವಿಧದ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವುದು ವೈಜ್ಞಾನಿಕ ಅಧ್ಯಯನದಿಂದ ಕಂಡುಬಂದಿದೆ ಎಂದು ಎನ್‌ಜಿಒ ಆರೋಪಿಸಿದೆ.

ಈ ದುರಂತದ ಸಂತ್ರಸ್ತರಿಗೆ ತಲಾ ₹5 ಲಕ್ಷ ಪರಿಹಾರ ನೀಡುವ ಭರವಸೆ ಕೊಡಲಾಗಿತ್ತು. ಆದರೆ, ಇದು ಈಡೇರಿಲ್ಲ. ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮುಂದಿನ ತಿಂಗಳು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅದಕ್ಕೂ ಮೊದಲು, ದುರಂತದಿಂದ ಉಂಟಾದ ಸಾವುನೋವುಗಳು ಮತ್ತು ರೋಗಗಳಿಗೆ ತುತ್ತಾದವರ ಬಗೆಗಿನ ಅಂಕಿಅಂಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಷ್ಕರಿಸಬೇಕು ಎಂದು ಎನ್‌ಜಿಒ ಒತ್ತಾಯಿಸಿದೆ.

ADVERTISEMENT

ಸಾವುನೋವಿನ ಕುರಿತು ದತ್ತಾಂಶ ತಿದ್ದುಪಡಿಗಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ವೈಜ್ಞಾನಿಕ ಮಾಹಿತಿ ಮತ್ತು ಅಧಿಕೃತ ದಾಖಲೆಗಳೊಂದಿಗೆ 2018ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಇದರಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಭೋಪಾಲ್‌ ಅನಿಲ ಪೀಡಿತ ಸ್ಟೇಷನರಿ ಕರ್ಮಚಾರಿ ಸಂಘದ ಮುಖ್ಯಸ್ಥೆ ರಶೀದಾ ಬೀ ಆರೋಪಿಸಿದ್ದಾರೆ.

ದುರಂತದಲ್ಲಿ ಸಂಭವಿಸಿದ ಸಾವು ಮತ್ತು ನೋವುಗಳ ಕುರಿತು ‌ಸುಪ್ರೀಂಕೋರ್ಟ್‌ ಅನ್ನು ತಪ್ಪು ದಾರಿಗೆ ಎಳೆಯಲು ‘ಉದ್ದೇಶ ಪೂರ್ವಕ’ ಪ್ರಯತ್ನದಂತೆ ಸಾಕ್ಷ್ಯ ಚಿತ್ರವೊಂದನ್ನು ಮಾಡಿರುವುದನ್ನು ಪ್ರಸ್ತಾಪಿಸಿ, ಈ ವರ್ಷದ ಜನವರಿಯಲ್ಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದು ಭೋಪಾಲ್ ಅನಿಲ ಪೀಡಿತ ಮಹಿಳಾ ಪುರುಷ ಸಂಘರ್ಷ ಮೋರ್ಚಾ ಅಧ್ಯಕ್ಷ ನವಾಬ್ ಖಾನ್ ಹೇಳಿದ್ದಾರೆ.

ಜಗತ್ತಿನಲ್ಲೇ ಇದು ಅತ್ಯಂತ ಭಯಾನಕ ಕೈಗಾರಿಕ ದುರಂತ. ಭೋಪಾಲ್‌ ನಗರದಲ್ಲಿದ್ದ ಕ್ರಿಮಿನಾಶಕ ತಯಾರಿಕೆಯ ಘಟಕ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನಲ್ಲಿ (ಯುಸಿಐಎಲ್‌) 1984ರ ಡಿಸೆಂಬರ್‌ 2–3ರ ಮಧ್ಯರಾತ್ರಿ ಅನಿಲ ಸೋರಿಕೆ ಆಗಿತ್ತು. ಈ ದುರಂತದಲ್ಲಿ ಸುಮಾರು 15 ಸಾವಿರ ಜನರು ಬೆಳಿಗ್ಗೆ ಎದ್ದೇಳುವುದರೊಳಗೆ ಚಿರನಿದ್ರೆಗೆ ಜಾರಿದ್ದರು. ವಿಷಾನಿಲ ಸೋರಿಕೆಯಿಂದ 5 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.