ADVERTISEMENT

ಮಧ್ಯಪ್ರದೇಶ | ದಲಿತ ಯುವತಿ ಶಂಕಾಸ್ಪದ ಸಾವು

ವರ್ಷದ ಹಿಂದೆ ಸೋದರ, ಶನಿವಾರ ಸಂಬಂಧಿ ಕೊಲೆ * ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪಿಟಿಐ
Published 28 ಮೇ 2024, 14:18 IST
Last Updated 28 ಮೇ 2024, 14:18 IST
<div class="paragraphs"><p>ಸಾವು </p></div>

ಸಾವು

   

ಪ್ರಾತಿನಿಧಿಕ ಚಿತ್ರ

ಸಾಗರ್ (ಮಧ್ಯಪ್ರದೇಶ): ಕಿರುಕುಳ ಪ್ರಕರಣದಲ್ಲಿ ರಾಜಿಯಾಗುವಂತೆ ಒತ್ತಡ ಹೇರಲು, ಕೆಲ ಅಪರಿಚಿತರು ಸೋದರನನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದ ದಲಿತ ಯುವತಿ ಅಂಜನಾ ಅಹಿರ್‌ವಾರ್ ಮಂಗಳವಾರ ಶಂಕಾಸ್ಪದವಾಗಿ ಮೃತಪಟ್ಟಿದ್ದಾರೆ.

ADVERTISEMENT

ಇದರೊಂದಿಗೆ ಕಿರುಕುಳಕ್ಕೆ ಒಳಗಾಗಿದ್ದ ಯುವತಿ ಸೇರಿದಂತೆ ಆ ಕುಟುಂಬದ ಮೂವರು ಕಳೆದ ಒಂದು ವರ್ಷದಲ್ಲಿ ಮೃತಪಟ್ಟಂತಾಗಿದೆ. ವರ್ಷದ ಹಿಂದೆ ಯುವತಿ ಸಹೋದರ ನಿತಿನ್‌ನನ್ನು ಅಪರಿಚಿತರು ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಆ ಬಗ್ಗೆ ಯುವತಿ ದೂರು ನೀಡಿದ್ದು ವಿಚಾರಣೆ ನಡೆಯುತ್ತಿದೆ. ಖುರೈ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಸಂಬಂಧಿ ರಾಜೇಂದ್ರ ಹಲ್ಲೆಗೀಡಾಗಿ ಮೃತಪಟ್ಟಿದ್ದರು. 

ದಲಿತ ಯುವತಿ ಸಾವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು, ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಮೋಹನ್‌ ಯಾದವ್‌ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂತಹ ಸ್ಥಿತಿ ಸಾಗರ್‌ ಅಷ್ಟೇ ಅಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿದೆ. ಕಾನೂನು ಸುವ್ಯವಸ್ಥೆ ಇಲ್ಲಿ ನಗೆಪಾಟಲಾಗಿದೆ. ಕ್ರಿಮಿನಲ್‌ಗಳಿಗೆ ಪೂರಕವಾದ ವಾತಾವರಣವಿದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಟೀಕಿಸಿದ್ದಾರೆ.

‘ಅಂಜನಾ ಅವರ ಸಹೋದರನನ್ನು ಸಾರ್ವಜನಿವಾಗಿ ಹತ್ಯೆ ಮಾಡಲಾಗಿತ್ತು. ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈಗ ದಲಿತ ಯುವತಿ ಕೂಡಾ ಶಂಕಾಸ್ಪದವಾಗಿ ಸತ್ತಿದ್ದಾರೆ’ ಎಂದು ಪಟ್ವಾರಿ ಅವರು ಹೇಳಿದ್ದಾರೆ. 

ಮಂಗಳವಾರ ತನ್ನ ಮಾವನ ಶವ ಒಯ್ಯುತ್ತಿದ್ದ ಆಂಬುಲೆನ್ಸ್‌ನಿಂದ ಬಿದ್ದು ಯುವತಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾವನ ಶವವನ್ನು ಅಂಜನಾ ಆಂಬುಲೆನ್ಸ್‌ನಲ್ಲಿ ಒಯ್ಯುತ್ತಿದ್ದರು. ಅವರ ಜೊತೆಗೆ ಕುಟುಂಬದ ಇತರ ಸದಸ್ಯರು ಇದ್ದರು. ಒಂದು ಹಂತದಲ್ಲಿ ಬಿದ್ದು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

ಹಳೆ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ಗುಂಪು ಘರ್ಷಣೆ ನಡೆದಿದ್ದು, ಅವರ ಮಾವ ರಾಜೇಂದ್ರ ಅಹಿರವಾರ್ ಅವರನ್ನು ಕೆಲವರು ತೀವ್ರವಾಗಿ ಹಲ್ಲೆ ನಡೆಸಿ ಕೊಂದಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ ತಿಳಿಸಿದ್ದಾರೆ.

ಕಿರುಕುಳದ ದೂರಿಗೆ ಸಂಬಂಧಿಸಿ ರಾಜಿಯಾಗುವಂತೆ ಒತ್ತಡ ಹೇರುವ ಕ್ರಮವಾಗಿ ಈಗ ರಾಜೇಂದ್ರ ಅಹಿರ್‌ವಾರ್ ಅವರ ಕೊಲೆ ನಡೆದಿದೆಯೇ ಎಂಬ ಪ್ರಶ್ನೆಗೆ, ತನಿಖೆಯಿಂದಲೇ ಈ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ ಎಂದರು. ನಿತಿನ್‌ ಕೊಲೆ ಪ್ರಕರಣದಲ್ಲಿ ರಾಜೇಂದ್ರ ಸಾಕ್ಷಿಯಾಗಿದ್ದರು.

ಮೃತ ಅಂಜನಾಳ ಸಹೋದರ ನಿತಿನ್‌ ಅಹಿರ್‌ವಾರ್‌ನ ಕೊಲೆ 2023ರ ಆಗಸ್ಟ್‌ 24ರಂದು ನಡೆದಿತ್ತು. ಅದಕ್ಕೂ ಹಿಂದೆ, ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಇವರನ್ನು ಬೆಂಬಲಿಸಿ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್ ಧರಣಿ ನಡೆಸಿದ್ದರು.

‘ಹಿಂದೆ, ಯುವತಿಗೆ ಉದ್ಯೋಗ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ನೀಡಲಿಲ್ಲ. ಆಕೆಯ ಅಣ್ಣನ ಕೊಲೆ ಆರೋಪಿಗಳನ್ನು ಬಂಧಿಸಿಲ್ಲ. ಆಕೆಗೆ ನೀಡಿದ್ದ ಪೊಲೀಸ್‌ ಭದ್ರತೆಯನ್ನು 10 ದಿನದ ಹಿಂದೆ ವಾಪಸ್‌ ಪಡೆಯಲಾಗಿದೆ’ ಎಂದು ದಿಗ್ವಿಜಯ್‌ ಸಿಂಗ್ ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.