ADVERTISEMENT

ಏಕಕಾಲಕ್ಕೆ ಹಲವು ಪದವಿ: ಸಮಿತಿ ರಚನೆ

ವಿಶ್ವವಿದ್ಯಾಲಯ ಅನುದಾನ ಆಯೋಗ ಚಿಂತನೆ

ಪಿಟಿಐ
Published 21 ಜುಲೈ 2019, 20:15 IST
Last Updated 21 ಜುಲೈ 2019, 20:15 IST
s
s   

ನವದೆಹಲಿ :ವಿದ್ಯಾರ್ಥಿಗಳು ಏಕಕಾಲಕ್ಕೆ ಹಲವು ಪದವಿಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಸಾಧ್ಯತೆಗಳ ಬಗ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪರಿಶೀಲಿಸುತ್ತಿದೆ.

ಈ ಬಗ್ಗೆ ಅಧ್ಯಯನಕ್ಕೆ ಯುಜಿಸಿ ಉಪಾಧ್ಯಕ್ಷ ಭೂಷಣ್‌ ಪಟವರ್ಧನ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಒಂದೇ ವಿಶ್ವವಿದ್ಯಾಲಯ ಅಥವಾ ಬೇರೆ, ಬೇರೆ ವಿಶ್ವವಿದ್ಯಾಲಯಗಳಿಂದ ದೂರಶಿಕ್ಷಣ, ಆನ್‌ಲೈನ್‌, ಅರೆಕಾಲಿಕ ಅಧ್ಯಯನ ಮೂಲಕ ವಿದ್ಯಾರ್ಥಿಗಳು ಪದವಿ ಪಡೆಯಲು ಸಾಧ್ಯವೇ ಎನ್ನುವ ಬಗ್ಗೆ ಈ ಸಮಿತಿ ಪರಿಶೀಲಿಸಲಿದೆ.

‘ಕಳೆದ ತಿಂಗಳು ಸಮಿತಿ ರಚಿಸಿದ್ದು, ಒಮ್ಮೆ ಸಭೆ ನಡೆದಿದೆ. ಯೋಜನೆಯನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟವರ ಜತೆ ಸಮಾಲೋಚನೆ ನಡೆದಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ವಿಷಯದ ಬಗ್ಗೆ ಯುಜಿಸಿ ಚಿಂತನೆ ಮಾಡುತ್ತಿರುವುದು ಇದೇ ಮೊದಲನೇ ಬಾರಿ ಅಲ್ಲ. 2012ರಲ್ಲೂ ಸಮಿತಿ ರಚಿಸಲಾಗಿತ್ತು. ಆದರೆ, ಸಮಿತಿ ವರದಿಗೆ ಒಪ್ಪಿಗೆ ದೊರೆಯಲಿಲ್ಲ.

2012ರಲ್ಲಿ ಹೈದರಾಬಾದ್‌ ವಿಶ್ವವಿದ್ಯಾಲಯದ ಕುಲಪತಿ ಫುರ್ಖಾನ್‌ ಖಮಾರ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು, ಪದವಿಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಯು ಹೆಚ್ಚುವರಿಯಾಗಿ ಗರಿಷ್ಠ ಇನ್ನೊಂದು ಪದವಿಯನ್ನು ಮುಕ್ತ ಅಥವಾ ದೂರಶಿಕ್ಷಣದ ಮೂಲಕ ಅದೇ ವಿಶ್ವವಿದ್ಯಾಲಯ ಅಥವಾ ಬೇರೆ ವಿಶ್ವವಿದ್ಯಾಲಯದಿಂದ ಪಡೆಯಲು ಅವಕಾಶ ಕಲ್ಪಿಸಬಹುದು ಎಂದು ಶಿಫಾರಸು ಮಾಡಿತ್ತು.

ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಸಮಸ್ಯೆಗಳು ಸೃಷ್ಟಿಯಾಗುವುದರಿಂದ ಏಕಕಾಲಕ್ಕೆ ತರಗತಿಗಳಿಗೆ ಹಾಜರಾಗಿ ಎರಡು ‘ರೆಗ್ಯುಲರ್‌’ ಪದವಿ ಪಡೆಯುವ ವ್ಯವಸ್ಥೆಗೆ ಅವಕಾಶ ನೀಡಬಾರದು ಎಂದು ತಿಳಿಸಿತ್ತು.

ಪದವಿ ಪಡೆಯುವ ವಿದ್ಯಾರ್ಥಿಗೆ ಒಂದು ಸರ್ಟಿಫಿಕೇಟ್‌, ಡಿಪ್ಲೊಮಾ, ಅಡ್ವಾನ್ಸ್ಡ್‌ ಡಿಪ್ಲೊಮಾ, ಪಿ.ಜಿ. ಡಿಪ್ಲೊಮಾ ಪಡೆಯಲು ಅವಕಾಶ ನೀಡಬಹುದು ಎಂದು ಸಮಿತಿ ಸಲಹೆ ನೀಡಿತ್ತು. ಈ ಎಲ್ಲ ಶಿಫಾರಸುಗಳಿಗೆ ಆಡಳಿತ ಮಂಡಳಿ ಹಾಗೂ ತಜ್ಞರು ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ, ಈ ಪ್ರಸ್ತಾವವನ್ನು ಕೈಬಿಡಲಾಯಿತು.

ಆದರೆ, ಈಗ ತಂತ್ರಜ್ಞಾನದಲ್ಲಿ ಅಪಾರ ಬದಲಾವಣೆಗಳಾಗಿವೆ. ಹಲವು ಮಂದಿ ರೆಗ್ಯೂಲರ್‌ ಪದವಿ ಜತೆ ವಿಶೇಷ ಕೋರ್ಸ್‌ಗಳನ್ನು ಕಲಿಯಲು ಆಸಕ್ತಿವಹಿಸಿರುವುದರಿಂದ ಹಳೆಯ ಪ್ರಸ್ತಾವನೆಯ ಬಗ್ಗೆ ಮರುಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.