ADVERTISEMENT

ಮಹಾರಾಷ್ಟ್ರದಲ್ಲಿ 36,265 ಕೋವಿಡ್ ಪ್ರಕರಣ, ಮುಂಬೈನಲ್ಲೇ 20,181

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2022, 15:53 IST
Last Updated 6 ಜನವರಿ 2022, 15:53 IST
   

ಮುಂಬೈ: ನಿನ್ನೆಗೆ ಹೋಲಿಸಿದರೆ ಇಂದು ಮುಂಬೈನಲ್ಲಿ ಶೇಕಡ 33 ರಷ್ಟು ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, 24 ಗಂಟೆಗಳಲ್ಲಿ 20,181ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇಂದು 4 ಮಂದಿ ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 79,260ಕ್ಕೆ ಏರಿದೆ.

ಇದರಲ್ಲಿ ಶೇಕಡ 85 ರಷ್ಟು ಮಂದಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಎಎನ್‌ಐ ಟ್ವೀಟ್ ಮಾಡಿದೆ. 1,170 ಮಂದಿ ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, 106 ಮಂದಿಗೆ ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ.

ಇನ್ನು, ಮಹಾರಾಷ್ಟ್ರದಲ್ಲಿ 36,265 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 13 ಜನರ ಸಾವು ಸಂಭವಿಸಿವೆ. 8,907 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 79 ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಓಮೈಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 876ಕ್ಕೆ ಏರಿದೆ. ಇದರಲ್ಲಿ 381 ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,14,847ಕ್ಕೆ ಜಿಗಿದಿದೆ.

ADVERTISEMENT

ಮುಂಬೈ ಮಹಾನಗರದಲ್ಲಿ ಹೆಚ್ಚು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸಹ ಕೋವಿಡ್‌ಗೆ ತುತ್ತಾಗುತ್ತಿದ್ದಾರೆ. ನಗರದ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ 150 ಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ದೃಢಪಟ್ಟಿದೆ. ಸಿಯಾನ್ ಆಸ್ಪತ್ರೆಯಲ್ಲಿ 80 ಜನರಿಗೆ ಕೋವಿಡ್ ಆಗಿದೆ. ಮಹಾರಾಷ್ಟ್ರ ರಾಜ್ಯದಾದ್ಯಂತ ಇದುವರೆಗೆ 260 ಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಸ್ಥಾನಿಕ ವೈದ್ಯರ ಸಂಘ ತಿಳಿಸಿದೆ ಎಂದು ಎನ್‌ಡಿಟಿವಿ ವರದಿಮಾಡಿದೆ. ನಗರದ ಸಾರ್ವಜನಿಕ ಸಾರಿಗೆ ಸೇವೆಯ 60 ಉದ್ಯೋಗಿಗಳಿಗೂ ಕೋವಿಡ್ ಆಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.