ADVERTISEMENT

ಮುಂಬೈ: ಧ್ವನಿವರ್ಧಕಗಳ ಶಬ್ದ ಕಡಿಮೆ ಮಾಡಿದ ಮಸೀದಿಗಳು

ಆಜಾನ್‌ನ ಶಬ್ದದ ಬಗ್ಗೆ ಹಿಂದೂ ಸಂಘಟನೆಗಳ ಆಕ್ಷೇಪ

ರಾಯಿಟರ್ಸ್
Published 8 ಮೇ 2022, 13:28 IST
Last Updated 8 ಮೇ 2022, 13:28 IST
ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಎಂಎನ್ಎಸ್‌ ಮುಖಂಡ ರಾಜ್‌ ಠಾಕ್ರೆ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಮುಂಬೈನ ಮಿನಾರ್‌ ಮಸೀದಿ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು (ಸಂಗ್ರಹ ಚಿತ್ರ) –ಪಿಟಿಐ ಚಿತ್ರ
ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಎಂಎನ್ಎಸ್‌ ಮುಖಂಡ ರಾಜ್‌ ಠಾಕ್ರೆ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಮುಂಬೈನ ಮಿನಾರ್‌ ಮಸೀದಿ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು (ಸಂಗ್ರಹ ಚಿತ್ರ) –ಪಿಟಿಐ ಚಿತ್ರ   

ಮುಂಬೈ: ಆಜಾನ್ ವೇಳೆ ಧ್ವನಿವರ್ಧಕಗಳಿಂದ ಹೊರಡುವ ಶಬ್ದವನ್ನು ಕಡಿಮೆ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಬೇಡಿಕೆ ಇಟ್ಟ ಬೆನ್ನಲ್ಲೇ, ಮುಂಬೈನ ಹಲವಾರು ಮಸೀದಿಗಳು ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡಿವೆ.

ಈ ವಿಷಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದ್ದು, ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡುವುದಾಗಿ ಮಸೀದಿಗಳು ತಿಳಿಸಿವೆ ಎಂದು ಮೂಲಗಳು ಹೇಳಿವೆ.

‘ಆಜಾನ್‌ನ ಶಬ್ದವು ಈಗ ರಾಜಕೀಯ ವಿಷಯವಾಗಿದೆ. ಆದರೆ, ಇದು ಕೋಮು ಬಣ್ಣ ಪಡೆಯುವುದು ನನಗೆ ಇಷ್ಟ ಇಲ್ಲ’ ಎಂದು ನಗರದಲ್ಲಿರುವ ಜುಮಾ ಮಸೀದಿಯ ಮುಖ್ಯ ಬೋಧಕ ಮೊಹಮ್ಮದ್‌ ಅಶ್ಫಾಕ್ ಕಾಜಿ ಹೇಳಿದ್ದಾರೆ.

ADVERTISEMENT

‘ಸ್ಥಳೀಯ ಹಿಂದೂ ಮುಖಂಡರೊಬ್ಬರ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, 900ಕ್ಕೂ ಅಧಿಕ ಮಸೀದಿಗಳು ಆಜಾನ್‌ ಸಮಯದಲ್ಲಿ ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡಿವೆ’ ಎಂದು ಪ್ರಭಾವಿ ಇಸ್ಲಾಮಿಕ್ ವಿದ್ವಾಂಸರಲ್ಲೊಬ್ಬರಾಗಿರುವ ಕಾಜಿ ಹೇಳಿದ್ದಾರೆ.

‘ಧ್ವನಿವರ್ಧಕ ಬಳಕೆ ವಿಷಯದಲ್ಲಿ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಯಾವುದೇ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ವಿ.ಎನ್‌.ಪಾಟೀಲ ಹೇಳಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖಂಡ ರಾಜ್‌ ಠಾಕ್ರೆ ಅವರು, ಮಸೀದಿ ಹಾಗೂ ಇತರ ಸ್ಥಳಗಳಲ್ಲಿನ ಧ್ವನಿವರ್ಧಕಗಳ ಶಬ್ದವು ನಿಯಮಗಳಂತೆ ಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕಳೆದ ಏಪ್ರಿಲ್‌ನಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆಯ ಕಾರ್ಯಕರ್ತರು ಮಸೀದಿಗಳ ಮುಂದೆ ಪ್ರತಿಭಟನೆ ರೂಪದಲ್ಲಿ ಹಿಂದೂ ಶ್ಲೋಕಗಳನ್ನು ಪಠಿಸುವುದಾಗಿ ಎಚ್ಚರಿಸಿದ್ದರು.

ಠಾಕ್ರೆ ಅವರ ಮಾತುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬೆನ್ನಲ್ಲೇ, ಹಿರಿಯ ಪೊಲೀಸ್‌ ಅಧಿಕಾರಿಗಳು ಕಾಜಿ ಅವರೂ ಸೇರಿದಂತೆ ಧರ್ಮ ಗುರುಗಳ ಸಭೆ ನಡೆಸಿದ್ದರು. ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡುವ ಬಗ್ಗೆ ಅವರೊಂದಿಗೆ ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.