ADVERTISEMENT

ಕೇರಳದಲ್ಲಿ ಮುಂದುವರಿದ ಮಳೆ, ಮುಂಬೈ ಮಹಾನಗರಕ್ಕೆ ತುಸು ಬಿಡುವು

ಪಿಟಿಐ
Published 27 ಮೇ 2025, 13:59 IST
Last Updated 27 ಮೇ 2025, 13:59 IST
ಮುಂಬೈನಲ್ಲಿ ಮಳೆಯಿಂದಾಗಿ ವಾಲ್ಕೇಶ್ವರ ರಸ್ತೆಯಲ್ಲಿ ಮಣ್ಣು ಕುಸಿದಿದೆ –ಪಿಟಿಐ ಚಿತ್ರ
ಮುಂಬೈನಲ್ಲಿ ಮಳೆಯಿಂದಾಗಿ ವಾಲ್ಕೇಶ್ವರ ರಸ್ತೆಯಲ್ಲಿ ಮಣ್ಣು ಕುಸಿದಿದೆ –ಪಿಟಿಐ ಚಿತ್ರ   

ತಿರುವನಂತಪುರ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಜನಜೀವನವನ್ನು ಮಂಗಳವಾರ ಅಸ್ತವ್ಯಸ್ತಗೊಳಿಸಿದೆ. ರಾಜ್ಯದ ಹಲವೆಡೆ ರೈಲು ಸಂಚಾರ ವಿಳಂಬ ಆಗಿದೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ, ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ರೈಲು ಹಳಿಗಳ ಮೇಲೆ ಮರಗಳು ಉರುಳಿಬಿದ್ದಿರುವುದು ಕಳವಳಕ್ಕೆ ಕಾರಣವಾಗಿದೆ. ತಿರುವನಂತಪುರಕ್ಕೆ ಬರುವ ವಂದೇ ಭಾರತ್ ಮತ್ತು ಪರಶುರಾಮ ಎಕ್ಸ್‌ಪ್ರೆಸ್‌ ರೈಲುಗಳು ವಿಳಂಬ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ನದಿಗಳಲ್ಲಿ ನೀರಿನ ಮಟ್ಟವು ಹೆಚ್ಚಾಗುತ್ತಿದೆ. ವಯನಾಡ್ ಜಿಲ್ಲೆಯ ಉತ್ತರ ಭಾಗದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇಲ್ಲಿ ಮಳೆಯು ಹಲವು ದಿನಗಳಿಂದ ಸುರಿಯುತ್ತಿದೆ.

ADVERTISEMENT

ನೀರು ನುಗ್ಗಿರುವ ಕಡೆಗಳಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ತಲುಪಲು ಫೈಬರ್ ದೋಣಿಗಳನ್ನು ಬಳಸುತ್ತಿದ್ದಾರೆ. ನೂರಾರು ಮಂದಿಯನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರ್ನಾಕುಳಂ ಜಿಲ್ಲೆಯಲ್ಲಿ ಕೆಲವೆಡೆ ಮನೆಗಳಿಗೆ, ಕೃಷಿ ಬೆಳೆಗಳಿಗೆ ಹಾನಿ ಆಗಿರುವುದಾಗಿ ವರದಿಯಾಗಿದೆ. ತಿರುವನಂತಪುರ ಸನಿಹದ ಕಲ್ಲಾರ್ ಪ್ರದೇಶದಲ್ಲಿ ಗುಡ್ಡಗಳಿಂದ ರಸ್ತೆಗೆ ಬಂಡೆಗಳು ಉರುಳಿದ್ದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಭಾರಿ ಮಳೆಯಿಂದಾಗಿ ರಾಜ್ಯದಾದ್ಯಂತ 607 ಮನೆಗಳು ನಾಶಗೊಂಡಿವೆ ಎಂದು ಕಂದಾಯ ಸಚಿವ ಕೆ. ರಾಜನ್ ಅವರು ತಿಳಿಸಿದ್ದಾರೆ. ರಾಜ್ಯದ ಹಲವೆಡೆ ವಿದ್ಯುತ್ ಪೂರೈಕೆಗೆ ಅಡ್ಡಿ ಆಗಿದ್ದು, ಈ ವಿಚಾರವಾಗಿ ಜನರು ಪ್ರತಿಭಟನೆ ನಡೆಸಿದ್ದಾರೆ.

ಕೋಲ್ಕತ್ತದಲ್ಲಿ ಮಳೆ ಸುರಿದ ನಂತರ ಮೈದಾನದಲ್ಲಿ ತರುಣರು ಫುಟ್‌ಬಾಲ್‌ ಆಡಿದರು –ಪಿಟಿಐ ಚಿತ್ರ
ತಿರುವನಂತರಪುರದ ವಿಳಿಂಜಂ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಅಲೆಗಳು ಎದ್ದಿವೆ –ಪಿಟಿಐ ಚಿತ್ರ

ಮಳೆಯಿಂದಾದ ಹಾನಿ

* ಮಳೆಯ ಕಾರಣದಿಂದಾಗಿ ಮರ ಮುರಿದುಬಿದ್ದು ತೇಜಸ್ ನಾಯಕ್‌ (24) ಎನ್ನುವವರು ಮುಂಬೈನಲ್ಲಿ ಮೃತಪಟ್ಟಿದ್ದಾರೆ.

* ಉತ್ತರಾಖಂಡದ ಡೆಹ್ರಾಡೂನ್‌ ಜಿಲ್ಲೆಯ ಚಕರಾತಾ ಪ್ರದೇಶದ ಜಲಪಾತದ ಬಳಿ ಪರ್ವತದಿಂದ ಮರ ಉರುಳಿಬಿದ್ದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬ ವ್ಯಕ್ತಿ ದೆಹಲಿಯವ.

ಮುಂಬೈ ಮಹಾನಗರಕ್ಕೆ ಮಳೆಯಿಂದ ತುಸು ಬಿಡುವು

ವಾರದ ಆರಂಭದಲ್ಲಿ ಭಾರಿ ಮಳೆಯನ್ನು ಕಂಡಿದ್ದ ಮುಂಬೈ ಮಹಾನಗರವು ಮಂಗಳವಾರ ಬೆಳಿಗ್ಗೆ ತುಸು ನಿರಾಳವಾಗಿತ್ತು. ಮಳೆರಾಯ ತುಸು ಬಿಡುವು ನೀಡಿದ್ದ. ಮುಂಬೈನ ಉಪನಗರ ರೈಲು ಸೇವೆ ಸೇರಿದಂತೆ ವಿವಿಧ ಸಾರ್ವಜನಿಕ ಸಾರಿಗೆ ಸೇವೆಗಳು ಕಾರ್ಯಾಚರಣೆ ನಡೆಸಿದವು ಕೆಲವೆಡೆ ಅಲ್ಪ ಪ್ರಮಾಣದ ವಿಳಂಬ ಉಂಟಾಗಿತ್ತು. ಭಾನುವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 11 ಗಂಟೆಯ ನಡುವಿನ ಅವಧಿಯಲ್ಲಿ ನರೀಮನ್ ಪಾಯಿಂಟ್‌ನಲ್ಲಿ 252 ಮಿ.ಮೀ. ಮಳೆ ಆಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹೇಳಿದೆ. 

ಮಂಗಳವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಹಳೆ ಮುಂಬೈ ಪ್ರದೇಶದಲ್ಲಿ ಸರಾಸರಿ 10.6 ಸೆಂ.ಮೀ. ಮಳೆ ಸುರಿದಿದೆ. ಸೋಮವಾರ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಜನಜೀವನಕ್ಕೆ ಅಡ್ಡಿ ಆಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.