ADVERTISEMENT

ಬಿಜೆಪಿ–ಶಿವಸೇನಾ ಸರ್ಕಾರ ರಚಿಸಲಿ: ಮಹಿಳೆಯಿಂದ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಪಿಟಿಐ
Published 25 ನವೆಂಬರ್ 2019, 12:41 IST
Last Updated 25 ನವೆಂಬರ್ 2019, 12:41 IST
ದೇವೇಂದ್ರ ಫಡಣವೀಸ್ ಮತ್ತು ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ದೇವೇಂದ್ರ ಫಡಣವೀಸ್ ಮತ್ತು ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)   

ಮುಂಬೈ:ಚುನಾವಣಾಪೂರ್ವ ಮೈತ್ರಿಯಂತೆ ಬಿಜೆಪಿ–ಶಿವಸೇನಾವೇ ಸರ್ಕಾರ ರಚಿಸಬೇಕು. ಈ ಕುರಿತು ನಿರ್ದೇಶನ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಸೋಮವಾರ ಖಾಸಗಿ ಅರ್ಜಿ ಸಲ್ಲಿಕೆಯಾಗಿದೆ.

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ನಿವಾಸಿ ಪ್ರಿಯಾ ಎಂಬುವವರು ಅರ್ಜಿ ಸಲ್ಲಿಸಿದ್ದು, ರಾಜ್ಯದ ಜನತೆ ಬಿಜೆಪಿ–ಶಿವಸೇನಾ ಮೈತ್ರಿಗೆ ಬಹುಮತ ನೀಡಿದ್ದಾರೆ. ಹೀಗಾಗಿ ಇತರ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸುವುದು ಮತದಾರರಿಗೆ ವಿಶ್ವಾಸದ್ರೋಹ ಮಾಡಿದಂತೆ. ಚುನಾವಣಾಪೂರ್ವ ಮೈತ್ರಿಗೆ ಬದ್ಧರಾಗಿರುವಂತೆ ಉಭಯ ಪಕ್ಷಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಚುನಾವಣೊತ್ತರ ಮೈತ್ರಿ ಮೂಲಕ ಶಿವಸೇನಾ–ಕಾಂಗ್ರೆಸ್–ಎನ್‌ಸಿಪಿ ಯಾರನ್ನೂ ಮುಖ್ಯಮಂತ್ರಿ ಮಾಡದಂತೆ ಮತ್ತು ಬಿಜೆಪಿ–ಅಜಿತ್ ಪವಾರ್ ಬಣ ಮೈತ್ರಿ ಮುಖ್ಯಮಂತ್ರಿಗಳ ಆಯ್ಕೆ ಮಾಡಿರುವುದಕ್ಕೆ ತಡೆಯೊಡ್ಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರ ರಚಿಸಲು ವಿಫಲವಾದ ಬಿಜೆಪಿ–ಶಿವಸೇನಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಉಭಯ ಪಕ್ಷಗಳು ಮತದಾರರ ನಂಬಿಕೆಗೆ ದ್ರೋಹ ಬಗೆದಿವೆ ಎಂದುಪ್ರಿಯಾ ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವುದು ಬಹುತೇಕ ಖಚಿತ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶುಕ್ರವಾರ ರಾತ್ರಿ ಸುದ್ದಿಯಾಗಿತ್ತು. ಆದರೆ, ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಶನಿವಾರ ಬೆಳಿಗ್ಗೆ ಬಿಜೆಪಿ–ಎನ್‌ಸಿಪಿ ಸರ್ಕಾರ ರಚನೆಯಾಗಿತ್ತು.ಬಿಜೆಪಿಯ ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾಗಿ ಮತ್ತು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮಹಾರಾಷ್ಟ್ರದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಏಕಾಏಕಿ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತುಸರ್ಕಾರ ರಚನೆ ಮಾಡಲು ಬಿಜೆಪಿ ಅವಕಾಶ ನೀಡಿದ ರಾಜ್ಯಪಾಲರ ನಡೆ ಪ್ರಶ್ನಿಸಿಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ಮುಕ್ತಾಯಗೊಳಿಸಿರುವ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.