ADVERTISEMENT

ಮುಂಬೈ: ಸ್ಕೂಲ್ ಬಸ್‌ ಪ್ರಯಾಣ ದರ ಶೇ 20ರಷ್ಟು ಹೆಚ್ಚಿಸಲು ನಿರ್ಧರಿಸಿದ ಮಾಲೀಕರು

ಪಿಟಿಐ
Published 13 ಜೂನ್ 2022, 10:51 IST
Last Updated 13 ಜೂನ್ 2022, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಶಾಲಾ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲು ಮುಂಬೈನ ಶಾಲಾ ಬಸ್‌ಗಳ ಮಾಲೀಕರು ನಿರ್ಧರಿಸಿದ್ದಾರೆ.

ಈ ಬಗ್ಗೆ ಮುಂಬೈ ಶಾಲಾ ಬಸ್‌ಗಳ ಮಾಲೀಕರ ಸಂಘ ಪ್ರಕಟಣೆ ನೀಡಿದ್ದು, ಕನಿಷ್ಠ ಶೇ 20 ರಷ್ಟು ದರ ಹೆಚ್ಚಳ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.ಕೊರೊನಾ ನಂತರ ಇಂದಿನಿಂದ (ಜೂನ್ 13) ಮುಂಬೈನಲ್ಲಿ ಎಲ್ಲ ಶಾಲೆಗಳು ಸಂಪೂರ್ಣವಾಗಿ ಭೌತಿಕವಾಗಿ ಪ್ರಾರಂಭವಾಗಿವೆ.

ಇಂಧನ ಬೆಲೆ ಹೆಚ್ಚಳ, ಆರ್‌ಟಿಒ ಮೊತ್ತ, ಡ್ರೈವರ್ ಹಾಗೂ ಕ್ಲೀನರ್‌ಗಳ ವೇತನ ಹೆಚ್ಚಳ ಹಾಗೂ ಇನ್ನಿತರ ಕಾರಣಗಳಿಂದ ಪ್ರಯಾಣ ದರವನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದುಮುಂಬೈ ಶಾಲಾ ಬಸ್‌ಗಳ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಮಣಿಯನ್ ತಿಳಿಸಿದ್ದಾರೆ.

ADVERTISEMENT

ಕೊರೊನಾ ನಂತರ ಸುಮಾರು 2 ವರ್ಷ ಮುಂಬೈ ಶಾಲಾ ಬಸ್‌ಗಳ ಮಾಲೀಕರು ಹಾಗೂ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವೂ ಕೂಡ ನಮ್ಮತ್ತ ಗಮನ ಹರಿಸಿಲ್ಲ. ಅವಧಿ ಮೀರಿದ ಬಸ್‌ಗಳನ್ನು ಇನ್ನೆರಡು ವರ್ಷ ಓಡಿಸಲು ಅನುಮತಿ ಕೊಡಲು ಕೇಳಿದರೂ ಪುರಸ್ಕರಿಸಿಲ್ಲ ಎಂದು ಅವರು ಹೇಳಿದ್ದಾರೆ.

ಮುಂಬೈ ಶಾಲಾ ಬಸ್‌ಗಳ ಮಾಲೀಕರ ಸಂಘದ ಈ ನಿರ್ಧಾರಕ್ಕೆ ಮುಂಬೈನ ಶಾಲಾ ಮಕ್ಕಳ ಅನೇಕ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾವು ಹಣದುಬ್ಬರದಿಂದ ತತ್ತರಿಸಿದ್ದೇವೆ. ಯಾವುದೇ ಉಳಿತಾಯ ಇಲ್ಲ. ಇಂತಹ ಸಮಯದಲ್ಲಿ ಶಾಲಾ ಮಕ್ಕಳ ಹೆಸರಿನಲ್ಲಿ ಬರೆ ಹಾಕುವುದು ಬೇಡ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.