ವಾಟರ್ ಮೆಟ್ರೊ
ಮುಂಬೈ: ಮುಂಬೈನಲ್ಲಿ ವಾಟರ್ ಮೆಟ್ರೊ ನಿರ್ಮಿಸುವ ಇರಾದೆ ಇದ್ದು, ಇದಕ್ಕಾಗಿ ವಿವರವಾದ ಯೋಜನಾ ವರದಿಯನ್ನು ಪ್ರಸ್ತುತಪಡಿಸಲು ಕೇರಳದ ಕೊಚ್ಚಿ ವಾಟರ್ ಮೆಟ್ರೊವನ್ನು ಕೋರಲಾಗಿದೆ ಎಂದು ಮಹಾರಾಷ್ಟ್ರ ಬಂದರು ಸಚಿವ ನಿತೇಶ್ ರಾಣೆ ಹೇಳಿದ್ದಾರೆ.
ತಿಂಗಳ ಅಂತ್ಯದ ವೇಳೆಗೆ ವಿಸ್ತೃತ ಯೋಜನಾ ವರದಿ ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ 50:50 ಪಾಲುದಾರಿಕೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಹೇಳಿದ್ದಾರೆ.
ಮುಂಬೈ ಏಳು ದ್ವೀಪಗಳಿಂದ ಮಾಡಲ್ಪಟ್ಟಿದೆ. ಆದರೆ ಜಲಮಾರ್ಗಗಳನ್ನು ಅವುಗಳ ಪೂರ್ಣ ಸಾಮರ್ಥ್ಯಕ್ಕೆ ಹಿಂದೆಂದೂ ಬಳಸಲಾಗಿಲ್ಲ. ವಾಟರ್ ಮೆಟ್ರೊ, ರಸ್ತೆಗಳು ಮತ್ತು ಉಪನಗರ ರೈಲ್ವೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ವಾಟರ್ ಮೆಟ್ರೊ ಯೋಜನೆಯು ನಗರ ಸಾರಿಗೆಯನ್ನು ಸುಧಾರಿಸಲಿದೆ. ಮುಂಬೈ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ ಎಂದು ರಾಣೆ ವಿವರಿಸಿದ್ದಾರೆ.
ನಾರಂಗಿ-ಖರ್ವದೇಶ್ವರಿ, ವಸೈ-ಮೀರಾ ಭಾಯಂದರ್, ಫೌಂಟೇನ್ ಜೆಟ್ಟಿ-ಗೈಮುಖ್-ನಾಗಲೆ, ಕೋಲ್ಸೆಟ್-ಕಲ್ಹೇರ್-ಮುಂಬ್ರಾ-ಕಲ್ಯಾಣ್, ಕಲ್ಯಾಣ್-ಮುಂಬ್ರಾ-ಮುಲುಂಡ್-ಐರೋಲಿ, ವಾಶಿ-ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ) ಎಂದೂ ಕರೆಯುತ್ತಾರೆ. ಡಿಸಿಟಿ-ಗೇಟ್‌ವೇ ಆಫ್ ಇಂಡಿಯಾ, ಮೀರಾ ಭಾಯಂದರ್-ವಸಾಯಿ-ಬೋರಿವಲಿ-ನರೀಮನ್ ಪಾಯಿಂಟ್-ಮಾಂಡ್ವಾ, ಬೇಲಾಪುರ-ಗೇಟ್‌ವೇ-ಮಾಂಡ್ವಾ, ಬೊರಿವಲಿ-ಗೊರೈ-ನರೀಮನ್ ಪಾಯಿಂಟ್ ಸಂಭವ್ಯ ಮಾರ್ಗಗಳು ಎಂದು ರಾಣೆ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 2023ರಲ್ಲಿ ಕೊಚ್ಚಿಯಲ್ಲಿ ಮೊದಲ ಬಾರಿಗೆ ವಾಟರ್ ಮೆಟ್ರೊ ಆರಂಭವಾಗಿತ್ತು. ಆ ಮೂಲಕ ಈ ಸಾರಿಗೆ ವ್ಯವಸ್ಥೆ ಹೊಂದಿದ ಮೊದಲ ನಗರ ಎಂಬ ಕೀರ್ತಿಗೂ ಪಾತ್ರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.