ADVERTISEMENT

ಮುಂಬೈ: ಕಳ್ಳನೆಂಬ ಶಂಕೆಯಿಂದ ಆಟೋರಿಕ್ಷಾ ಚಾಲಕನನ್ನು ಥಳಿಸಿದ ಗುಂಪು

ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ಚಾಲಕ * ಅಪರಾಧಿಗಳಿಗೆ ರಾಜಕೀಯ ನಂಟು– ಆರೋಪ

ಪಿಟಿಐ
Published 24 ಜನವರಿ 2022, 14:11 IST
Last Updated 24 ಜನವರಿ 2022, 14:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಉತ್ತರ ಮುಂಬೈನ ಮಲಾಡ್ ಪ್ರದೇಶದಲ್ಲಿ ಆಟೋರಿಕ್ಷಾ ಚಾಲಕನನ್ನು ಕಳ್ಳನೆಂದು ಶಂಕಿಸಿ, ಗುಂಪೊಂದು ಥಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಚಾಲಕ ಸಾವಿಗೀಡಾದ ಘಟನೆ ಈಚೆಗೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತ ಚಾಲಕನ ಸಂಬಂಧಿಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಆರೋಪಿಗಳು ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ. ಸ್ಥಳೀಯ ರಾಜಕಾರಣಿಗಳ ಒತ್ತಡದಿಂದಾಗಿ ಪ್ರಕರಣದ ತನಿಖೆಗೆ ತಡೆಯೊಡ್ಡಲಾಗಿದೆ ಎಂದೂ ಸಂಬಂಧಿಕರು ದೂರಿದ್ದಾರೆ.

ವಿವರ: ದಾಬುನಗರದಲ್ಲಿ 10 ದಿನಗಳ ಹಿಂದೆ ನಿಲ್ಲಿಸಿದ್ದ ತಮ್ಮ ಆಟೋರಿಕ್ಷಾವನ್ನು ಪರಿಶೀಲಿಸಲು ಚಾಲಕ ಶಾರುಕ್ ಶೇಖ್ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಳ್ಳನೆಂದು ಭಾವಿಸಿ ಸ್ಥಳೀಯ ನಿವಾಸಿಗಳ ಗುಂಪೊಂದು ಥಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿಯೇ ಸಮೀಪದ ಸ್ಥಳವೊಂದರಲ್ಲಿ ಎಸೆದು ಹೋಗಲಾಗಿತ್ತು.

ADVERTISEMENT

‘ಈ ಬಗ್ಗೆ ದಾರಿಹೋಕರು ನೀಡಿದ್ದ ಮಾಹಿತಿಯ ಮೇರೆಗೆ ಶಾರುಕ್‌ ಅವರನ್ನು ಠಾಣೆಗೆ ಕರೆತಂದು ದರೋಡೆ ಪ್ರಕರಣ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಜಾಮೀನು ಪಡೆದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಚಾಲಕನ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಅವರ ಮೈಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ತನಿಖೆ ಪ್ರಗತಿಯಲ್ಲಿದೆ’ ಎಂದು ಸಮತಾ ನಗರ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಆನಂದರಾವ್ ಹಾಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.