ADVERTISEMENT

ತಾಯಿಯದ್ದು ಆತ್ಮಹತ್ಯೆಯಲ್ಲ... ಕೊಲೆ: ಚಿತ್ರ ಬಿಡಿಸಿ ತಂದೆ ಹಿಡಿದುಕೊಟ್ಟ ಮಗಳು!

ಪಿಟಿಐ
Published 18 ಫೆಬ್ರುವರಿ 2025, 10:06 IST
Last Updated 18 ಫೆಬ್ರುವರಿ 2025, 10:06 IST
<div class="paragraphs"><p>ರೇಖಾಚಿತ್ರ&nbsp;</p></div>

ರೇಖಾಚಿತ್ರ 

   

Credit: iStock Photo

ಲಖನೌ: ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಆಕೆಯ ಐದು ವರ್ಷದ ಮಗಳು ರೇಖಾಚಿತ್ರ ಬಿಡಿಸುವ ಮೂಲಕ ತಂದೆಯ ಪೈಶಾಚಿಕ ಕೃತ್ಯವನ್ನು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸೋಮವಾರ ಸಂಜೆ ಪಂಚವಟಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೆ, ತನಿಖೆ ಬಳಿಕ ಕೌಟುಂಬಿಕ ಕಲಹದಿಂದಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದು ತಿಳಿಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮೃತ ಮಹಿಳೆಯನ್ನು 28 ವರ್ಷದ ಸೋನಾಲಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ಸಂದೀಪ್ ಬುಧೋಲಿಯಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

ಸಂದೀಪ್ ಬುಧೋಲಿಯಾ ಆರು ವರ್ಷಗಳ ಹಿಂದೆ ಸೋನಾಲಿಯನ್ನು ವಿವಾಹವಾಗಿದ್ದ. ಸೋನಾಲಿಗೆ ಸಂದೀಪ್ ಮತ್ತು ಆತನ ತಾಯಿ ನಿತ್ಯ ವರದಕ್ಷಿಣೆ ಕಿರುಕುಳ ನೀಡುವುದರ ಜತೆಗೆ ಮನಸೋಇಚ್ಛೆ ಹಲ್ಲೆ ನಡೆಸುತ್ತಿದ್ದರು ಎಂದು ಸೋನಾಲಿ ತಂದೆ ಸಂಜೀವ್ ತ್ರಿಪಾಠಿ ದೂರಿದ್ದಾರೆ.

‘ನಾವು ಈ ಹಿಂದೆ ಸಂದೀಪ್ ಮತ್ತು ಆತನ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದೆವು. ಸೋನಾಲಿ ಎರಡು ವರ್ಷಗಳಿಂದ ನಮ್ಮೊಂದಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ, ಕುಟುಂಬಸ್ಥರ ರಾಜಿ ಸಂಧಾನದಿಂದಾಗಿ ಸೋನಾಲಿ ಗಂಡನ ಮನೆಗೆ ಹೋಗಿದ್ದಳು. ಆದರೆ, ಸೋಮವಾರ ಸೋನಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಕರು ಕರೆ ಮಾಡಿ ತಿಳಿಸಿದ್ದರು’ ಎಂದು ತ್ರಿಪಾಠಿ ವಿವರಿಸಿದ್ದಾರೆ.

ಸೋನಾಲಿಯ ಐದು ವರ್ಷದ ಮಗಳು ದರ್ಶಿಕಾ, ರೇಖಾಚಿತ್ರವನ್ನು ಬಿಡಿಸುವ ಮೂಲಕ ನನ್ನ ತಂದೆಯೇ ತಾಯಿಯನ್ನು ಥಳಿಸಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಕಣ್ಣೀರಿಟ್ಟಿದ್ದಾಳೆ.

ಘಟನೆ ಸಂಬಂಧ ಸಂದೀಪ್ ಬುಧೋಲಿಯಾ, ಆತನ ತಾಯಿ ವಿನಿತಾ, ಸಹೋದರ ಕೃಷ್ಣ ಕುಮಾರ್ ಬುಧೋಲಿಯಾ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.