ADVERTISEMENT

ಉಗ್ರ ಹತ್ಯೆ: ಎರಡನೇ ದಿನವೂ ಕರ್ಫ್ಯೂ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 14:22 IST
Last Updated 25 ಮೇ 2019, 14:22 IST

ಶ್ರೀನಗರ (ಪಿಟಿಐ):ಅಲ್‌ಕೈದಾ ಮುಖಂಡ ಜಾಕೀರ್‌ ಮುಸಾ ಹತ್ಯೆ ಹಿನ್ನೆಲೆಯಲ್ಲಿ, ಕಾಶ್ಮೀರದ ಹಲವೆಡೆ ಹೇರಲಾಗಿದ್ದಕರ್ಫ್ಯೂವನ್ನು ಶನಿವಾರವೂ ಮುಂದುವರಿಸಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಲಾಗಿದೆ.

‘ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. ಬರಾಮುಲ್ಲಾ-ಬನಿಹಾಲ್ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶ್ರೀನಗರದ ನೌಹಟ್ಟಾ, ರೈನಾವರಿ, ಖನ್ಯಾರ್, ಸಫಕಾದಲ್ ಮತ್ತು ಎಂ ಆರ್ ಗುಂಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾದ ನಿರ್ಬಂಧಹೇರಲಾಗಿದೆ.ಮೈಸುಮಾ ಮತ್ತು ಕ್ರಾಲ್‌ಖುಡ್‌ ಪ್ರದೇಶಗಳಲ್ಲಿ ಭಾಗಶಃ ನಿರ್ಬಂಧ ಜಾರಿಯಲಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ನಗರದ ಎಲ್ಲೆಡೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿದಿಲ್ಲ. ಕಾರು ಮತ್ತು ಆಟೊಗಳ ಸಂಚಾರ ವಿರಳವಾಗಿತ್ತು.

ಪುಲ್ವಾಮಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರ ಮೂಸಾ ಹತ್ಯೆಯಾಗಿದ್ದ. ಈ ದಾಳಿಯನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ, ಬಂದ್‌ ನೆಡೆದಿತ್ತು.ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.