ADVERTISEMENT

ಮಾಜಿ ಸಚಿವೆಯನ್ನು ಏಕೆ ಬಂಧಿಸಿಲ್ಲ: ಸುಪ್ರೀಂಕೋರ್ಟ್‌ ಪ್ರಶ್ನೆ

ಮುಜಫ್ಫರ್‌ಪುರದ ಪುನರ್ವಸತಿ ಕೇಂದ್ರದ ಲೈಂಗಿಕ ಹಗರಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:03 IST
Last Updated 30 ಅಕ್ಟೋಬರ್ 2018, 20:03 IST
ಮಂಜು ವರ್ಮಾ
ಮಂಜು ವರ್ಮಾ   

ನವದೆಹಲಿ: ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ನಿವಾಸದಲ್ಲಿ ಸಿಕ್ಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಸಂಬಂಧಿಸಿದಂತೆ ಇದುವರೆಗೂಅವರನ್ನು ಏಕೆ ಬಂಧಿಸಿಲ್ಲ ಎಂದು ಬಿಹಾರದ ಪೊಲೀಸರನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಮುಜಫ್ಫರ್‌ಪುರದಪುನರ್ವಸತಿ ಕೇಂದ್ರದಲ್ಲಿನ ಲೈಂಗಿಕ ಹಗರಣದಲ್ಲಿ ಪ್ರಮುಖ ಆರೋಪಿ ಬ್ರಜೇಶ್‌ ಠಾಕೂರ್‌ ಜೊತೆ ಮಂಜುವರ್ಮಾ ಅವರ ಪತಿ ಚಂದ್ರಶೇಖರ್‌ ನಿಕಟ ಸಂಪರ್ಕ ಹೊಂದಿದ್ದರು. ಈ‍ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದ ಬಳಿಕ ಸಚಿವಸ್ಥಾನಕ್ಕೆ ಮಂಜುವರ್ಮಾ ಅವರು ರಾಜೀನಾಮೆ ನೀಡಿದ್ದರು.ಇದಾದ ಬಳಿಕ ವರ್ಮಾ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ಕೆಲವು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮಂಜುವರ್ಮಾ ಪತಿ ಚಂದ್ರಶೇಖರ್‌ ವರ್ಮಾ ಅವರುಬೆಗುಸರಾಯ್‌ ನ್ಯಾಯಾಲಯದ ಮುಂದೆ ಸೋಮವಾರ ಶರಣಾಗಿದ್ದರು.

ADVERTISEMENT

‘ಲೈಂಗಿಕ ಹಗರಣದ ಪ್ರಮುಖ ಆರೋಪಿ ಬ್ರಜೇಶ್‌ ಠಾಕೂರ್‌ನನ್ನು ಬಿಹಾರದ ಬಾಗಲ್ಪುರ ಜೈಲಿನಿಂದ ಅತೀ ಭದ್ರತೆ ಹೊಂದಿರುವ ಪಂಜಬ್‌ನಲ್ಲಿರುವ ಪಟಿಯಾಲ ಜೈಲಿಗೆ ಸ್ಥಳಾಂತರಿಸಿ’ ಎಂದು ಎಂ.ಬಿ.ಲೋಕೂರ್‌, ಎಸ್‌.ಎ.ನಜೀರ್‌, ದೀಪಕರತ್‌ ಗುಪ್ತಾ ನೇತೃತ್ವದ ನ್ಯಾಯಪೀಠ ಇದೇ ವೇಳೆ ಸೂಚನೆ ನೀಡಿತು.

‘ಠಾಕೂರ್‌ ಅತ್ಯಂತ ಪ್ರಭಾವಿ ವ್ಯಕ್ತಿ. ಸದ್ಯ ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜೈಲಿನ ಆತನ ಕೋಣೆಯಿಂದ ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಬಿಐ ನೀಡಿರುವ ವರದಿಯಲ್ಲಿ ತಿಳಿಸಿದೆ ಎಂದ ನ್ಯಾಯಪೀಠ,ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಮಾಜಿ ಸಚಿವೆಯನ್ನು ಇದುವರೆಗೂ ಯಾವ ಕಾರಣಕ್ಕಾಗಿ ಬಂಧಿಸಿಲ್ಲ ಎಂದು ಬಿಹಾರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.