ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಜನಗಣತಿ ಮಾಡದೇ ಇರುವುದು ನನ್ನ ತಪ್ಪು. ಆ ತಪ್ಪನ್ನು ಈಗ ಸರಿಪಡಿಸುತ್ತಿದ್ದೇನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನನ್ನಿಂದ ಸಾಧ್ಯವಿದ್ದರೂ ಇತರೆ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡದೇ ಇರುವುದು ನನ್ನ 21 ವರ್ಷಗಳ ರಾಜಕೀಯ ಜೀವನದಲ್ಲಿ ದೊಡ್ಡ ತಪ್ಪಾಗಿದೆ ಎಂದಿದ್ದಾರೆ.
ಇಲ್ಲಿನ ತಲ್ಕಟೋರಾ ಸ್ಟೇಡಿಯಂನಲ್ಲಿ ಒಬಿಸಿಯ ಭಾಗಿಧಾರಿ ನ್ಯಾಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣದ ಜಾತಿ ಗಣತಿಯು ದೇಶದಲ್ಲಿ ತಲ್ಲಣ ಮುಡಿಸಿದೆ ಎಂದಿದ್ದಾರೆ.
2004ರಿಂದ ರಾಜಕೀಯದಲ್ಲಿದ್ದೇನೆ. 21 ವರ್ಷ ಕಳೆದಿದೆ. ನನ್ನ ರಾಜಕೀಯ ಜೀವನದಲ್ಲಿ ಏನು ಉತ್ತಮ ಕೆಲಸ ಮಾಡಿದ್ದೇನೆ. ಯಾವುದನ್ನು ಮಾಡಲು ವಿಫಲನಾಗಿದ್ದೇನೆ ಎಂಬುದನ್ನು ನೋಡಿದರೆ, ಭೂಸ್ವಾಧೀನ ಮಸೂದೆ, ಎಂಜಿಎನ್‌ಆರ್‌ಎಜಿಎ, ಆಹಾರ ಮಸೂದೆ, ಆದಿವಾಸಿಗಳಿಗಾಗಿ ಹೋರಾಟ ನನ್ನ ಕಣ್ಣ ಮುಂದೆ ಬರುತ್ತವೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಕಲ್ಯಾಣದ ವಿಷಯದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಆದರೆ, ದಲಿತರು, ಆದಿವಾಸಿಗಳ ಸಮಸ್ಯೆ ಅರ್ಥ ಮಾಡಿಕೊಂಡಂತೆ 10–15 ವರ್ಷಗಳಲ್ಲಿ ಒಬಿಸಿ ವರ್ಗದ ಸಮಸ್ಯೆ ನನಗೆ ಅರ್ಥವಾಗಲಿಲ್ಲ ಎಂದಿದ್ದಾರೆ.
ಒಬಿಸಿಗಳ ಸಮಸ್ಯೆಗಳು ಮರೆಮಾಚಲ್ಪಟ್ಟಿವೆ. ನಿಮ್ಮ ಇತಿಹಾಸ ಮತ್ತು ಸಮಸ್ಯೆಗಳ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ತಿಳಿದಿದ್ದರೆ, ನಾನು ಜಾತಿ ಜನಗಣತಿಯನ್ನು ಮಾಡಿಸಿಬಿಡುತ್ತಿದ್ದೆ. ಆದರೆ, ಅದನ್ನು ಮಾಡದ ಬಗ್ಗೆ ನನಗೆ ವಿಷಾದವಿದೆ. ಅದು ನನ್ನ ತಪ್ಪು, ಕಾಂಗ್ರೆಸ್‌ನ ತಪ್ಪಲ್ಲ. ನಾನು ಈಗ ಆ ತಪ್ಪನ್ನು ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ.
ಆದರೂ, ಜಾತಿ ಜನಗಣತಿಯನ್ನು ಈ ಮೊದಲೇ ಮಾಡದಿರುವುದು ಒಂದು ರೀತಿಯಲ್ಲಿ ಉತ್ತಮ, ಏಕೆಂದರೆ, ಅದು ಈಗ ತೆಲಂಗಾಣ ಮಾದರಿಯನ್ನು ಅನುಸರಿಸಿ ಮಾಡಲಾಗುತ್ತಿರುವ ರೀತಿಯಲ್ಲಿ ಮಾಡಲಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ತೆಲಂಗಾಣದಲ್ಲಿ ಜಾತಿ ಜನಗಣತಿ ಒಂದು ರಾಜಕೀಯ ಭೂಕಂಪ. ಅದು ದೇಶದ ರಾಜಕೀಯವನ್ನು ಅಲುಗಾಡಿಸಿದೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ನಾವು ಜಾತಿ ಜನಗಣತಿ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.