ADVERTISEMENT

ರಾಜ್ಯದ ಪೂರ್ವ ಭಾಗಕ್ಕೆ ವಿಶೇಷ ಪ್ಯಾಕೇಜ್‌ ಭರವಸೆ

ನಾಗಾಲ್ಯಾಂಡ್‌: ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 15:34 IST
Last Updated 15 ಫೆಬ್ರುವರಿ 2023, 15:34 IST
   

ಕೊಹಿಮಾ (ಪಿಟಿಐ): ಇದೇ 27ರಂದು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ರಾಜ್ಯದ ಪೂರ್ವ ಭಾಗಕ್ಕೆ ವಿಶೇಷ ಪ್ಯಾಕೇಜ್‌ ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ತನ್ನ ಮಿತ್ರ ಪಕ್ಷ ನ್ಯಾಷನಲ್‌ ಡೆಮಾಕ್ರೆಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ (ಎನ್‌ಡಿಪಿಪಿ) ಜೊತೆ ಈಗಾಗಲೇ ಸೀಟು ಹಂಚಿಕೆ ಮಾಡಿಕೊಂಡಿರುವ ಬಿಜೆಪಿ, ಒಟ್ಟು 20 ಸ್ಥಾನಗಳಿಗೆ ಸ್ಪರ್ಧಿಸಲಿದೆ. ಎನ್‌ಡಿಪಿಪಿ 40 ಸ್ಥಾನಗಳಿಗೆ ಸ್ಪರ್ಧಿಸಲಿದೆ.

ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಡುಗಡೆ ಮಾಡಿದರು. ಬಿಜೆಪಿಯು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮಂಡಳಿ ರಚಿಸುವುದು ಸೇರಿ ಪ್ರಣಾಳಿಕೆಯಲ್ಲಿ ಹಲವಾರು ಪ್ರಮುಖ ಅಂಶಗಳಲ್ಲಿ ಇವೆ.

ADVERTISEMENT

ಕೌಶಲ ಅಭಿವೃದ್ಧಿ ಜೊತೆಗೆ ಮೌಲಸೌಕರ್ಯ ಅಭಿವೃದ್ಧಿ, ಆರ್ಥಿಕ ಮುನ್ನಡೆ ಮತ್ತು ಆರೋಗ್ಯ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಪೂರ್ವ ನಾಗಾಲ್ಯಾಂಡ್‌ ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ನಾಗಾಲ್ಯಾಂಡ್‌ಅನ್ನು ಹಾದುಹೋಗುವ ಹೆದ್ದಾರಿ ನಿರ್ಮಿಸುವುದಾಗಿ ಹೇಳಲಾಗಿದೆ.

ನಾಗಾಲ್ಯಾಂಡ್‌ ಸಂಸ್ಕೃತಿ ಅಧ್ಯಯನಕ್ಕಾಗಿ ದತ್ತಿ ಸ್ಥಾಪಿಸುವುದಾಗಿ ಹೇಳಿರುವ ಬಿಜೆಪಿ, ನಾಗಾ ಗುರುತನ್ನು ಕಾಪಾಡಲು ಮತ್ತು ಸಂಸ್ಕೃತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ₹1,000 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ. ಬುಡಕಟ್ಟು ಜನಾಂಗಗಳ ಪ್ರಮುಖ ಆಚರಣೆಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ₹100 ಕೋಟಿ ಬಂಡವಾಳ ಹೂಡುವುದಾಗಿ ಭರವಸೆ ನೀಡಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌) ಫಲಾನುಭವಿಗಳ ಕುಟುಂಬವೊಂದಕ್ಕೆ ಪ್ರತಿ ತಿಂಗಳು ಉಚಿತ ಅಕ್ಕಿ, ಗೋಧಿ, 5 ಕಿಲೋಗ್ರಾಂ ಕಡಲೇ ಕಾಳು ಮತ್ತು 1 ಲೀಟರ್‌ ಸಾಸಿವೆ ಎಣ್ಣೆ ನೀಡುವುದಾಗಿ ಹೇಳಿದೆ. ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ನೀಡಲಾಗುವ ಮಾಸಿಕ ಪಿಂಚಣಿಯನ್ನು ₹ 1,000ಕ್ಕೆ ಏರಿಸುವುದಾಗಿ ಮತ್ತು ನಗದು ರಹಿತ ವೈದ್ಯಕೀಯ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಆರೋಗ್ಯ ವಿಮೆ ಕಾರ್ಡ್‌ಗಳನ್ನು ನೀಡಲಾಗುವುದು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅಸಂಘಟಿತ ವಲಯಗಳ ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮೆ ಮತ್ತು ಸಾಮಾಜಿಕ ಭದ್ರತೆ ವಿಮೆ ನೀಡಲಾಗುವುದು. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ 2025ರ ಒಳಗೆ ಕೈಗೆಟುಕುವ ಬೆಲೆಯಲ್ಲಿ ಎಲ್ಲರಿಗೂ ವಸತಿ ನಿರ್ಮಿಸಿಕೊಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಕೃಷಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ವಾರ್ಷಿಕ ₹6,000 ಸಹಾಯ ಧನಕ್ಕೆ ರಾಜ್ಯ ಸರ್ಕಾರವು ₹2,000 ಸೇರಿಸಿ ಸಹಾಯ ಧನವನ್ನು ₹8,000ಕ್ಕೆ ಏರಿಸಲಿದೆ. ₹500 ಕೋಟಿ ವೆಚ್ಚದಲ್ಲಿ ಕೃಷಿ–ಮೂಲಸೌಕರ್ಯ ಯೋಜನೆ ಜಾರಿ ಮಾಡಲಿದೆ ಎಂದು ಆಶ್ವಾಸನೆ ನೀಡಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ‘ನೀಡೊನ್ವು ಅಂಗಾಮಿ’ ಹೆಸರಿನಲ್ಲಿ ಮಹಿಳಾ ಕಲ್ಯಾಣ ಯೋಜನೆ ಜಾರಿ ಮಾಡುವುದಾಗಿ ಹೇಳಿರುವ ಬಿಜೆಪಿ, ಹೆಣ್ಣು ಮಗು ಜನಿಸಿದರೆ ₹50,000 ಬಾಂಡ್‌ ಒದಗಿಸುವುದಾಗಿ ಹೇಳಿದೆ. ಜೊತೆಗೆ, ಹೆಣ್ಣು ಮಕ್ಕಳಿಗೆ ಸ್ನಾತ್ತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಮತ್ತು ಅಧಿಕ ಅಂಕ ಗಳಿಸುವ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಕೂಟಿ ಕೊಡುವುದಾಗಿ ಹೇಳಿದೆ.

ಯುವಜನ ಸಬಲೀಕರಣಕ್ಕಾಗಿ ಯೋಜನೆಗಳನ್ನು ರೂಪಿಸುವುದಾಗಿ ಹೇಳಿರುವ ಬಿಜೆಪಿ, ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಯುವಜನರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದಾಗಿ ಮತ್ತು 50,000 ಯುವಕರಿಗೆ ತರಬೇತಿ, ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ನಾಗಾಲ್ಯಾಂಡ್‌ ಪ್ರವಾಸೋದ್ಯಮ ಕೌಶಲ ಯೋಜನೆಯನ್ನು ಪರಿಚಯಿಸುವುದಾಗಿ ಹೇಳಿದೆ.

ರಾಜ್ಯದ ಎಲ್ಲಾ ಹಳ್ಳಿಗಳನ್ನು ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳ ಜೊತೆ ಸಂಪರ್ಕಿಸುವಂಥ ರಸ್ತೆ ನಿರ್ಮಾಣ ಕೂಡಾ ಪ್ರಣಾಳಿಕೆಯಲ್ಲಿ ಸೇರಿದೆ.

ನಾಗಾ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಕೊನೆ ಹಂತದಲ್ಲಿದೆ ಈ ವಿಚಾರ ಪ್ರಣಾಳಿಕೆಯಲ್ಲಿ ಸೇರಿಸಲಾಗಿಲ್ಲ ಎಂದು ನಡ್ಡಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.