ADVERTISEMENT

ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

ಪಿಟಿಐ
Published 2 ಮಾರ್ಚ್ 2026, 15:56 IST
Last Updated 2 ಮಾರ್ಚ್ 2026, 15:56 IST
.........
.........   

ನಾಗ್ಪುರ: ಇಲ್ಲಿನ ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಎಸ್‌ಬಿಎಲ್‌ ಎನರ್ಜಿ ಲಿಮಿಟೆಡ್‌ನ ಒಂಬತ್ತು ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ.

ಸಂಸ್ಥೆಯ 21 ಮಂದಿ ನಿರ್ದೇಶಕರು ಹಾಗೂ ಪಾಲುದಾರರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 105ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ. 

ಗಣಿಗಾರಿಕೆ ಹಾಗೂ ಕೈಗಾರಿಕಾ ಸ್ಫೋಟಕಗಳನ್ನು ತಯಾರಿಸುವ ಕಾರ್ಖಾನೆಯ ‍‍ಪ್ಯಾಕಿಂಗ್‌ ಘಟಕದಲ್ಲಿ ಭಾನುವಾರ ಸ್ಫೋಟ ಸಂಭವಿಸಿತ್ತು. ದುರಂತದಲ್ಲಿ ಭಾನುವಾರ 18 ಮಂದಿ ಕಾರ್ಮಿಕರು ಸಾವಿಗೀಡಾಗಿದ್ದರು ಮತ್ತು 24 ಮಂದಿ ಗಾಯಗೊಂಡಿದ್ದರು. 

ADVERTISEMENT

ಸ್ಫೋಟ ಸಂಭವಿಸಿದ ಸಂಸ್ಥೆಯಲ್ಲಿ ಹಲವು ಸುರಕ್ಷತಾ ಲೋಪಗಳು ಇದ್ದವು ಎಂದು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಹಾಗೂ ಕೈಗಾರಿಕಾ ಸುರಕ್ಷತಾ ಮತ್ತು ಆರೋಗ್ಯ ನಿರ್ದೇಶನಾಲಯವು ನೀಡಿರುವ ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಈ ವರದಿಯನ್ನು ಆಧರಿಸಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹರ್ಷ್‌ ಪೋದಾರ್‌ ಹೇಳಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಆರೋಪಿಗಳನ್ನು ಬಂಧಿಸುವ ‍ಪ್ರಯತ್ನ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಸುರಕ್ಷತಾ ಸಂಸ್ಥೆಗಳೂ ಹೊಣೆ’

ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷ್ಯಿಸಿರುವುದೇ ಸ್ಫೋಟಕ್ಕೆ ಕಾರಣ ಎಂದು ‍ಪ್ರಾಥಮಿಕ ತನಿಖೆಯಲ್ಲಿ‍ ತಿಳಿದುಬಂದಿದೆ. ಇದಕ್ಕೆ ಸುರಕ್ಷತಾ ಸಂಸ್ಥೆಗಳು ಕೂಡ ಹೊಣೆ ಎಂದು ಮಹಾರಾಷ್ಟ್ರ ಉಸ್ತುವಾರಿ ಸಚಿವ ಚಂದ್ರಶೇಖರ ಬವಂಕುಲೆ ಹೇಳಿದ್ದಾರೆ. 

ಮೃತರ ಸಂಖ್ಯೆ 19ಕ್ಕೆ ಏರಿಕೆ

ಸ್ಟೋಟದಲ್ಲಿ ಗಾಯಗೊಂಡಿದ್ದ 24 ಮಂದಿಯ ಪೈಕಿ ಒಬ್ಬ ಕಾರ್ಮಿಕ ಸೋಮವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಉಳಿದ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಅವರಲ್ಲಿ 13 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.